ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ 23,635 ವಿದ್ಯಾರ್ಥಿಗಳು ಗೈರು

ಬೆಂಗಳೂರು, ಜೂ.18: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಕಳೆದ ಮೂರು ತಿಂಗಳಿನಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ರಾಜ್ಯಾದ್ಯಂತ ಇಂದು ನಡೆದಿದ್ದು, 5,95,997 ವಿದ್ಯಾರ್ಥಿಗಳ ಪೈಕಿ 5,72,665 ಪರೀಕ್ಷೆಗೆ ಹಾಜರಾಗಿದ್ದಾರೆ. 23,635 ಮಂದಿ ಗೈರು ಹಾಜರಾಗಿದ್ದಾರೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಬೆಂಗಳೂರು ಉತ್ತರ 1,301, ಬೆಂಗಳೂರು ದಕ್ಷಿಣ 1,641, ಕಲಬುರಗಿಯಲ್ಲಿ 1,748, ರಾಯಚೂರು 1,091 ಹಾಗೂ ದಕ್ಷಿಣ ಕನ್ನಡ 387, ಉಡುಪಿ 194 ಹಾಗೂ ಕೊಡಗಿನಲ್ಲಿ 99 ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ ಒಟ್ಟು 23,635 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಕಂಟೈನ್ಮೆಟ್ ಮಾಡಲಾಗಿದ್ದ ಪ್ರದೇಶದಿಂದ ಪರೀಕ್ಷೆ ಬರೆಯಲು ಧಾರವಾಡದಲ್ಲಿ 162, ಶಿವಮೊಗ್ಗ 15, ದಾವಣಗೆರೆ 13, ಉಡುಪಿ 9, ಮೈಸೂರು 5, ತುಮಕೂರು 5, ಚಿಕ್ಕಬಳ್ಳಾಪುರ 5, ಮಂಡ್ಯ 2, ರಾಮನಗರ 1, ಬಳ್ಳಾರಿ 1 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ನಡುವೆ ಬೆಂಗಳೂರು ಸೇರಿದಂತೆ ಕೆಲವೆಡೆ ಥರ್ಮಲ್ ಸ್ಕ್ಯಾನಿಂಗ್ ವೇಳೆ ನಿಗಧಿಗಿಂತ ಹೆಚ್ಚು ಉಷ್ಣತೆ ಕಂಡು ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು.
ಕೆಲವೆಡೆ ಸಮಸ್ಯೆ: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಆದಾಗ್ಯು ಬೆಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವೇಳೆ, ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ಹುಡುಕುವಾಗ ನೂಕು ನುಗ್ಗಲು ನಡೆದಿದೆ.
ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೆಳಗ್ಗೆ 8ರಿಂದ 9ಗಂಟೆಗೆ ಕರೆದುಕೊಂಡು ಬಂದಿದ್ದರು. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಿರುವಾಗಲೇ ಥರ್ಮಲ್ ಸ್ಕ್ಯಾನಿಂಗ್ ಪ್ರಾರಂಭಿಸಿ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ. ಇದಕ್ಕೆ ವಿಳಂಬ ಮಾಡಿದ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದು ಪೋಷಕರು ಹಾಗೂ ಸಿಬ್ಬಂದಿಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಸ್ವಚ್ಛತೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲವೆಂದು ಪೋಷಕರು ಆರೋಪಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಒಟ್ಟು 39 ವಿಷಯಗಳಲ್ಲಿ 26 ವಿಷಯಗಳ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದೆ. ಉಳಿದ 12 ವಿಷಯಗಳ ಮೌಲ್ಯಮಾಪನದ ಕಾರ್ಯಪ್ರಾರಂಭವಾಗಿದ್ದು, ಇದರೊಂದಿಗೆ ಈಗ ಇಂಗ್ಲಿಷ್ ವಿಷಯವು ಸೇರ್ಪಡೆಗೊಂಡಿದೆ.






.jpg)
.jpg)
.jpg)
.jpg)
.jpg)

