ಪರೀಕ್ಷೆಗೆ ಗೈರಾಗಲು ಕಾರಣ ಗುರುತಿಸಲಾಗುವುದು: ಸಚಿವ ಸುರೇಶ್ ಕುಮಾರ್
ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ

ಬೆಂಗಳೂರು, ಜೂ.18: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ಮುಗಿದಿದೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 32ಜಿಲ್ಲೆಗಳಲ್ಲಿ 5,95,977ಪೈಕಿ 5,72,665 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 23,635 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಇದರಲ್ಲಿ ಕಲಬುರಗಿಯಲ್ಲಿ 1,748 ಗರಿಷ್ಟ ಸಂಖ್ಯೆ ಹಾಗೂ ಕೊಡಗಿನಲ್ಲಿ ಕನಿಷ್ಠ 99 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದಕ್ಕೆ ಕಾರಣವನ್ನು ಗುರುತಿಸಿ ಮುಂದೆ ಅವರು ಪರೀಕ್ಷೆ ಬರೆಯಲು ಇಚ್ಚಿಸಿದರೆ ಪೂರಕ ಪರೀಕ್ಷೆಗೆ ಹಾಜರಾಗಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ನಡೆದ ಇಂಗ್ಲಿಷ್ ಪರೀಕ್ಷೆಗೆ 6,71,635 ವಿದ್ಯಾರ್ಥಿಗಳ ಪೈಕಿ 36,642 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಕಳೆದ ಸಾಲಿನ ಹಾಜರಾತಿ ಶೇ.94.54ಇದ್ದು, ಈ ವರ್ಷ ಶೇ.96.03 ಇದೆ. ಕಳೆದ ಬಾರಿಗಿಂತ ಶೇ.2ರಷ್ಟು ಹೆಚ್ಚಾಗಿದೆ. ಕೊರೋನ ಸೋಂಕಿನ ಆತಂಕದ ಪರಿಸ್ಥಿತಿಯಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇದು ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಿಯು ಇಂಗ್ಲಿಷ್ ಪರೀಕ್ಷೆಯ ಮಾದರಿಯಲ್ಲಿಯೇ ಜೂ.25ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಯು ಆರೋಗ್ಯಯುತ ವಾತಾವರಣದಲ್ಲಿ ನಡೆಯಲಿದೆ. ಆರೋಗ್ಯ, ಸಾರಿಗೆ, ಗೃಹ ಇಲಾಖೆ ಸೇರಿದಂತೆ ಆಯಾ ಭಾಗದ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲಿದ್ದಾರೆ.
-ಸುರೇಶ್‍ಕುಮಾರ್, ಶಿಕ್ಷಣ ಸಚಿವ







