ಕಾಲ್ತೋಡು: ಭಾರೀ ಮಳೆಯಿಂದ ತೋಡಿಗೆ ಬಿದ್ದು ಕೃಷಿಕ ನೀರುಪಾಲು

ಉಡುಪಿ, ಜೂ.18: ಕೃಷಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಕೃಷಿಕರೊಬ್ಬರು ಭಾರೀ ಮಳೆಯಿಂದಾಗಿ ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜೂ.16ರಂದು ಸಂಜೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೊಳಂಬಳ್ಳಿ ಎಂಬಲ್ಲಿ ನಡೆದಿದೆ.
ಬೊಳಂಬಳ್ಳಿ ಹೆದ್ದಾರಿಕೊಡ್ಲು ನಿವಾಸಿ ಗೋಪಾಲ ನಾಯ್ಕಿ (51) ಎಂಬ ವರು ಮನೆ ಸಮೀಪದ ಬೇರೆಯವರ ಗದ್ದೆಯಲ್ಲಿ ಕೆಲಸ ಮುಗಿಸಿ, ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಅಕಸ್ಮಿಕವಾಗಿ ತುಂಬಿ ಹರಿಯುತಿದ್ದ ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಹುಡು ಕಾಟ ನಡೆಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಬೈಂದೂರು ತಹಶೀಲ್ದಾರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 61.80 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 68.5ಮೀ.ಮೀ., ಕುಂದಾಪುರ -64.5 ಮೀ.ಮೀ., ಕಾರ್ಕಳ ತಾಲೂಕಿನಲ್ಲಿ 51.9ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸಿಡಿಲು ಬಡಿದು ಹಾನಿ: ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಕಮಲ ಬಾಯಿ ಹಾಗೂ ಶಕುಂತಳ ಎಂಬವರ ಮನೆಯ ಮಾಡು ಮತ್ತು ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದು, ಇದರಿಂದ ಕ್ರಮವಾಗಿ 70 ಸಾವಿರ ರೂ. ಹಾಗೂ 25ಸಾವಿರ ರೂ. ನಷ್ಟ ಉಂಟಾಗಿದೆ.
ಗಾಳಿ ಮಳೆಯಿಂದ ಬೈಕಾಡಿ ಗ್ರಾಮದ ಜಯಲಕ್ಷ್ಮೀ ಆಚಾರ್ ಎಂಬವರ ಮನೆಗೆ ಸುಮಾರು 15ಸಾವಿರ ರೂ., ಹಾರಾಡಿ ಗ್ರಾಮದ ಮೊಯಿದ್ದೀನ್ ಸಾಹೇಬ್ ಎಂಬವರ ಮನೆಗೆ 25ಸಾವಿರ ರೂ. ಹಾಗೂ ಕಚ್ಚೂರು ಗ್ರಾಮದ ಜ್ಯೋತಿ ಎಂಬವರ ಮನೆಗೆ 5000ೂ.ನಷ್ಟು ಹಾನಿಯಾಗಿ ನಷ್ಟ ಉಂಟಾಗಿದೆ.
ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಎಂಬವರ ದನದ ಕೊಟ್ಟಿಗೆ ಗಾಳಿ ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು, ಇದ್ದರಿಂದ 25 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಚಾಂತಾರು ಗ್ರಾಮದ ಅಣ್ಣಪ್ಪನಾಯ್ಕ ದನದ ಕೊಟ್ಟಿಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ 10 ಸಾವಿರ ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.







