ಕೋವಿಡ್-19 ಮುನ್ನೆಚ್ಚರಿಕೆ ಕ್ರಮದೊಂದಿಗೆ ದ್ವಿ.ಪಿಯು ಪರೀಕ್ಷೆ ಯಶಸ್ವಿ
► ಕಂಟೈನ್ಮೆಂಟ್ ಝೋನ್‌ನಿಂದ ಪರೀಕ್ಷೆ ಬರೆದ 9 ಮಂದಿ ► ಉಡುಪಿ ಜಿಲ್ಲೆಯಲ್ಲಿ ಒಟ್ಟು 163 ಮಂದಿ ಗೈರು

ಉಡುಪಿ, ಜೂ.18: ಕೋವಿಡ್-19 ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ದ್ವಿತೀಯ ಪಿಯುಸಿಯ ಇಂಗ್ಲೀಷ್ ಭಾಷಾ ಪರೀಕ್ಷೆಯು ಇಂದು ಉಡುಪಿ ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಕೋವಿಡ್-19 ಮುನ್ನೆಚ್ಚರಿಕಾ ಕ್ರಮ ಗಳೊಂದಿಗೆ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಯಾವುದೇ ಭಾಗದಿಂದ ಯಾವುದೇ ರೀತಿಯ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ಜಿಲ್ಲೆಯ ವಿದ್ಯಾರ್ಥಿಗಳು, ಹೊರರಾಜ್ಯದ ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ಹೆಸರು ನೊಂದಾಯಿಸಿಕೊಂಡ ಒಟ್ಟು 13,617 ವಿದ್ಯಾರ್ಥಿಗಳಲ್ಲಿ 13,454 ಮಂದಿ ಇಂದು ಪರೀಕ್ಷೆ ಬರೆದಿದ್ದು ಒಟ್ಟಾರೆಯಾಗಿ 163 ಮಂದಿ ಗೈರುಹಾಜರಾಗಿದ್ದಾರೆ ಎಂದವರು ತಿಳಿಸಿದರು.
ಉಡುಪಿ ಜಿಲ್ಲೆಯಿಂದ ಹೊಸಬರು ಸೇರಿದಂತೆ ಒಟ್ಟು 13,433 ಮಂದಿ ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದು ಇವರಲ್ಲಿ 13,274 ಮಂದಿ ಇಂದು ಪರೀಕ್ಷೆ ಬರೆದಿದ್ದಾರೆ. ಉಳಿದ 159 ಮಂದಿ ಗೈರುಹಾಜರಾಗಿದ್ದಾರೆ. ಹೊರರಾಜ್ಯದಿಂದ ನೊಂದಾಯಿಸಿಕೊಂಡ 23 ಮಂದಿಯೂ ಪರೀಕ್ಷೆಗೆ ಹಾಜ ರಾಗಿದ್ದಾರೆ. ಹೊಸಜಿಲ್ಲೆಗಳಿಂದ ಹೆಸರು ನೊಂದಾಯಿಸಿಕೊಂಡ 161 ಮಂದಿಯಲ್ಲಿ 157 ಮಂದಿ ಇಂದು ಹಾಜರಾಗಿದ್ದು, ನಾಲ್ವರು ಗೈರಾಗಿದ್ದಾರೆ ಎಂದರು.
ಯಾರಿಗೂ ತೊಂದರೆಯಾಗಿಲ್ಲ: ಇಂದು ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಮಗುವಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗಿಲ್ಲ. ಇಲಾಖೆ ಇದಕ್ಕಾಗಿ ಕಳೆದ ಕೆಲವು ದಿನಗಳಿಂದ ಇದಕ್ಕಾಗಿ ಸಂಪೂರ್ಣ ವ್ಯವಸ್ಥೆ ಮಾಡಿತ್ತು. ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಪ್ರಾರಂಭ ಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 90ಕ್ಕೂ ಅಧಿಕ ಕೆಎಸ್ಸಾರ್ಟಿಸಿ ಬಸ್, ಕೆಲವಾರು ಶಾಲಾ ಬಸ್‌ಗಳನ್ನು ವಿದ್ಯಾರ್ಥಿಗಳನ್ನು ಕರೆ ತರಲು ನಿಯೋಜಿಸಿತ್ತು. ಅಲ್ಲದೇ ಬಸ್ ಸಿಗದೆ ತೊಂದರೆಯಾದ ವಿದ್ಯಾರ್ಥಿಯನ್ನು ತಾಲೂಕು ಕೇಂದ್ರದಿಂದಲೇ ಸರಕಾರಿ ವಾಹನ ಕಳುಹಿಸಿ ಪರೀಕ್ಷಾ ಕೇಂದ್ರ ತಲುಪಿಸಲಾಗಿತ್ತು ಎಂದು ಭಗವಂತ ಕಟ್ಟಿಮನಿ ತಿಳಿಸಿದರು.
ಜಿಲ್ಲೆಯ ಎಲ್ಲಾ 27 ಪರೀಕ್ಷಾ ಕೇಂದ್ರಗಳನ್ನು ಸ್ಯಾನಟೈಸ್ ಮಾಡಿದ್ದು, ಇಂದು ಕೋವಿಡ್-19ರ ನಿಯಂತ್ರಣಕ್ಕೆ ಇರುವ ನಿಯಮಗಳಂತೆ ಎಲ್ಲಾ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳ ಸೋಂಕು ಲಕ್ಷಣಗಳನ್ನು ಪರೀಕ್ಷಿಸಿದ ಬಳಿಕ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು.
ಜಿಲ್ಲೆಯಲ್ಲಿ ಯಾವುದೇ ಕುಂದುಕೊರತೆ ಉಂಟಾಗದಂತೆ ಇಂದಿನ ಪರೀಕ್ಷೆಯನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಂದಾಗಲಿ, ಹೆತ್ತವರಿಂದಾಗಲಿ ಯಾವುದೇ ದೂರುಗಳು ಬಂದಿಲ್ಲ ಎಂದು ಡಿಡಿಪಿಯು ತಿಳಿಸಿದರು.
ಪರೀಕ್ಷೆ ಬರೆದ ಕಂಟೈನ್ಮೆಂಟ್ ರೆನ್‌ನ 9 ಮಂದಿ
ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳದಲ್ಲಿರುವ ಕಂಟೈನ್ಮೆಂಟ್ ರೆನ್‌ಗಳಿಂದ ಬಂದ ಒಟ್ಟು 9 ಮಂದಿ ವಿದ್ಯಾರ್ಥಿಗಳು ಪ್ರತ್ಯೇಕ ವ್ಯವಸ್ಥೆ ಯೊಂದಿಗೆ ಇಂದು ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಡಿಡಿಪಿಯು ಭಗವಂತ ಕಟ್ಟಿಮನಿ ತಿಳಿಸಿದರು.
ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಡೆಂಗಿಯಿಂದ ಬಳಲುತಿದ್ದ ವಿದ್ಯಾರ್ಥಿ ಯೊಬ್ಬರು ಪ್ರತ್ಯೇಕ ವ್ಯವಸ್ಥೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದೂ ಅವರು ತಿಳಿಸಿದರು.
ಇಂದು ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್‌ಗಳನ್ನು ಧರಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳು ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕಾನರ್‌ನಿಂದ ಪರೀಕ್ಷಿಸಿ, ನೀರು ಮತ್ತು ಸಾಬೂನಿನಿಂದ ಕೈತೊಳೆದ ಬಳಿಕ ಪರೀಕ್ಷಾ ಕೊಠಡಿಗೆ ಮಾಸ್ಕ್ ಧರಿಸಿ ಪ್ರವೇಶಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಕಟ್ಟಿಮನಿ ತಿಳಿಸಿದರು.












