ಕಾಂಗ್ರೆಸ್ ಹುದ್ದೆಯಿಂದ ವಜಾಗೊಂಡ ಸಂಜಯ್ ಝಾ: ಪಕ್ಷವನ್ನು ಇನ್ನಷ್ಟು ಕಟುವಾಗಿ ಟೀಕಿಸಿ ಟ್ವೀಟ್

ಹೊಸದಿಲ್ಲಿ,ಜೂ.18: ರಾಷ್ಟ್ರಮಟ್ಟದ ದೈನಿಕವೊಂದರಲ್ಲಿ ತನ್ನದೇ ಪಕ್ಷವನ್ನು ಟೀಕಿಸಿ ಲೇಖನವೊಂದನ್ನು ಬರೆದಿದ್ದಕ್ಕಾಗಿ ಕಾಂಗ್ರೆಸ್ ವಕ್ತಾರನ ಹುದ್ದೆಯಿಂದ ವಜಾಗೊಂಡಿರುವ ಸಂಜಯ್ ಝಾ ಅವರು ಗುರುವಾರ ಟ್ವೀಟ್‌ವೊಂದರಲ್ಲಿ ಪಕ್ಷದ ಮೇರು ನಾಯಕರಾಗಿದ್ದ ಜವಾಹರಲಾಲ್ ನೆಹರು ಅವರನ್ನು ಪ್ರಸ್ತಾಪಿಸಿ ಇನ್ನಷ್ಟು ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಜಾಸತ್ತಾತ್ಮಕ,ಸಹಿಷ್ಣುತೆ ಮತ್ತು ಉದಾರ ಮೌಲ್ಯಗಳಿಂದ ದೂರ ಸರಿದಿದೆ ಎಂದು ಅವರು ಕುಟುಕಿದ್ದಾರೆ.
‘ಪಂಡಿತ ನೆಹರು ಅವರು ಒಮ್ಮೆ ವೃತ್ತಪತ್ರಿಕೆಯಲ್ಲಿ ಸ್ವಯಂ ವಿಮರ್ಶಿಸಿಕೊಂಡು ಮತ್ತು ಸರ್ವಾಧಿಕಾರಿಯಾಗುವುದರ ವಿರುದ್ಧ ಎಚ್ಚರಿಕೆಯೊಂದಿಗೆ ಅನಾಮಿಕ ಲೇಖನವೊಂದನ್ನು ಬರೆದಿದ್ದರು. ಅದು ಪ್ರಜಾಸತ್ತಾತ್ಮಕ,ಸ್ವಾತಂತ್ರ್ಯ,ಸಹಿಷ್ಣು ತೆ ಮತ್ತು ಎಲ್ಲರನ್ನೂ ಒಳಗೊಂಡ ನಿಜವಾದ ಕಾಂಗ್ರೆಸ್ ಆಗಿತ್ತು. ನಾವೀಗ ಆ ವೌಲ್ಯಗಳಿಂದ ತುಂಬ ದೂರ ಸರಿದಿದ್ದೇವೆ,ಏಕೆ?’ ಎಂದು ಟ್ವೀಟಿಸಿರುವ ಝಾ,ತಾನು ಪಕ್ಷದ ಬದ್ಧ,ನಿರ್ಭೀತಿಯ ಸಿದ್ಧಾಂತವಾದಿ ಸೈನಿಕನಾಗಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಝಾ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿದ್ದರು ಮತ್ತು ಅಭಿಷೇಕ ದತ್ತ ಹಾಗೂ ಸಾಧನಾ ಭಾರ್ತಿ ಅವರನ್ನು ರಾಷ್ಟ್ರೀಯ ಮಾಧ್ಯಮ ಪೆನಲಿಸ್ಟ್‌ಗಳನ್ನಾಗಿ ನೇಮಕಗೊಳಿಸಿದ್ದರು.
ಕಾಂಗ್ರೆಸ್ ಪಕ್ಷವು ತುಂಬ ದಣಿವನ್ನು ಪ್ರದರ್ಶಿಸುತ್ತಿದೆ,ತನ್ನ ರಾಜಕೀಯ ಅಳಿವಿನ ಬಗ್ಗೆ ಅದರ ಉದಾಸೀನತೆ ದೊಡ್ಡ ತೊಡಕಾಗಿದೆ. ಪಕ್ಷವನ್ನು ಮೇಲಕ್ಕೆತ್ತಲು ಮತ್ತು ತುರ್ತು ಪ್ರಜ್ಞೆಯೊಂದಿಗೆ ಮುಂದಕ್ಕೆ ಸಾಗುವ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಝಾ ತನ್ನ ವಜಾಕ್ಕೆ ಕಾರಣವಾದ ಲೇಖನದಲ್ಲಿ ಬರೆದಿದ್ದರು.







