2011ರ ಭಾರತ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಮಾರಾಟವಾಗಿತ್ತು: ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಆರೋಪ

ಕೊಲಂಬೊ, ಜೂ.18: 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಶ್ರೀಲಂಕಾ ಭಾರತಕ್ಕೆ ಮಾರಾಟ ಮಾಡಿತ್ತು ಎಂದು ದೇಶದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ ಗಮಗೆ ಗುರುವಾರ ಆರೋಪಿಸಿದ್ದಾರೆ.
ಅಲುತ್ ಗಮಗೆ 2010ರಿಂದ 2015ರವರೆಗೆ ಕ್ರೀಡಾ ಸಚಿವರಾಗಿದ್ದರು. ಈಗ ಅವರು ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ರಾಜ್ಯ ಸಚಿವರಾಗಿದ್ದಾರೆ.
‘‘2011ರಲ್ಲಿ, ನಾವು ಗೆಲ್ಲಬೇಕಿತ್ತು, ಆದರೆ ನಾವು ಪಂದ್ಯವನ್ನು ಮಾರಿದ್ದೇವೆ. ನಾನು ಈಗ ಅದರ ಬಗ್ಗೆ ಮಾತನಾಡಬಲ್ಲೆ ಎಂದು ನಾನು ಭಾವಿಸುತ್ತೇನೆ. ನಾನು ಆಟಗಾರರನ್ನು ಸಂಪರ್ಕಿಸುತ್ತಿಲ್ಲ, ಆದರೆ ಕೆಲವು ವಿಭಾಗಗಳು ಭಾಗಿಯಾಗಿದ್ದವು’’ ಎಂದು ಆರೋಪಿಸಿದರು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಆರು ವಿಕೆಟ್‌ಗಳಿಂದ ಸೋಲನುಭವಿಸಿತು. ನಿರೂಪಕನಾಗಿ ಕ್ರೀಡಾಂಗಣದಲ್ಲಿದ್ದ ರಣತುಂಗ ಈ ಹಿಂದೆ ಸೋಲಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ರಣತುಂಗ 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾಕ್ಕೆ ಏನಾಯಿತು ಎಂದು ನಾವು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದರು.
‘‘ನಾನು ಈಗ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ಒಂದು ದಿನ ವಿಚಾರಣೆ ಮಾಡಬೇಕು. ಆಟಗಾರರಿಗೆ ಕೊಳೆಯನ್ನು ಮರೆಮಾಡಲು ಸಾಧ್ಯವಿಲ್ಲ’’ ಎಂದು ರಣತುಂಗ ಹೇಳಿದರು.
ಶ್ರೀಲಂಕಾ ಕ್ರಿಕೆಟ್ ಹಲವು ಭ್ರಷ್ಟಾಚಾರ ವಿವಾದಗಳಲ್ಲಿ ಸಿಲುಕಿದೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧದ 2018ರ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸೇರಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಮೂವರು ಮಾಜಿ ಆಟಗಾರರ ಬಗ್ಗೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಈ ತಿಂಗಳ ಆರಂಭದಲ್ಲಿ ಶ್ರೀಲಂಕಾದ ಕ್ರಿಕೆಟ್ ಮಂಡಳಿ ಹೇಳಿತ್ತು.
ಸೀಮಿತ ಓವರ್ ಗಳ ಲೀಗ್ ಗೆ ಸಂಬಂಧಿಸಿದ ಭ್ರಷ್ಟಾಚಾರದ ಕಾರಣಕ್ಕಾಗಿ ಶ್ರೀಲಂಕಾದ ಮಾಜಿ ವೇಗದ ಬೌಲರ್ ದಿಲ್ಹರಾ ಲೋಕು ಹೆಟ್ಟಿಜ್ ರನ್ನು 2018ರಲ್ಲಿ ಅಮಾನತುಗೊಳಿಸಲಾಗಿತ್ತು.
ಮಾಜಿ ನಾಯಕ ಮತ್ತು ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಸನತ್ ಜಯಸೂರ್ಯ ಮತ್ತು ಮಾಜಿ ವೇಗಿ ನುವಾನ್ ರೊಯ್ಸೆ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಮ್ಯಾಚ್ ಫಿಕ್ಸಿಂಗ್ ತನಿಖೆಗೆ ಸಹಕರಿಸಲು ವಿಫಲವಾದ ಆರೋಪದಲ್ಲಿ ಜಯಸೂರ್ಯ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು.







