ಜೂ.20ರಂದು ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನಕ್ಕೆ ಪ್ರಧಾನಿ ಚಾಲನೆ

ಹೊಸದಿಲ್ಲಿ, ಜೂ.18: ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರು ಮತ್ತು ಗ್ರಾಮೀಣ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲು ‘ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್’ ಎಂಬ ಬೃಹತ್ ಗ್ರಾಮೀಣ ಸಾರ್ವಜನಿಕ ಯೋಜನೆಯನ್ನು ಭಾರತ ಸರಕಾರವು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಜೂ.20ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ-ಕಾನ್ಫರೆನ್ಸ್ ಮೂಲಕ ಬಿಹಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಅಭಿಯಾನವನ್ನು ಬಿಹಾರದ ಖಗಾರಿಯಾ ಜಿಲ್ಲೆಯ ಬೆಲ್ದೌರ್ ಬ್ಲಾಕ್‍ನ ತೆಲಿಹಾರ್ ಗ್ರಾಮದಿಂದ ಪ್ರಾರಂಭಿಸಲಾಗುವುದು. ಇದಲ್ಲದೆ, ಇತರ ಐದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳ ಕೇಂದ್ರ ಸಚಿವರು ವರ್ಚುವಲ್ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.
ಆರು ರಾಜ್ಯಗಳ 116 ಜಿಲ್ಲೆಗಳ ಹಳ್ಳಿಗಳು ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಲಾಗುತ್ತದೆ.
125 ದಿನಗಳ ಈ ಅಭಿಯಾನವು ಮಿಷನ್ ಮೋಡ್‍ನಲ್ಲಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಮತ್ತು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸಲು 50 ಸಾವಿರ ಕೋಟಿ ರೂ. ಮೌಲ್ಯದ 25 ರೀತಿಯ ಕಾಮಗಾರಿಗಳನ್ನು ನಡೆಸಲಾಗುವುದು.
27 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಒಳಗೊಂಡ ಅಭಿಯಾನಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ 25 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಒಟ್ಟು 116 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳು ಸುಮಾರು ಮೂರನೇ ಎರಡರಷ್ಟು ವಲಸೆ ಕಾರ್ಮಿಕರನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ.
ಅಭಿಯಾನವು ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಗಣಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳು , ಟೆಲಿಕಾಂ ಮತ್ತು ಕೃಷಿಯಂತಹ 12 ವಿವಿಧ ಸಚಿವಾಲಯಗಳು, ಇಲಾಖೆಗಳ ನಡುವೆ ಸಂಘಟಿತ ಪ್ರಯತ್ನವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.







