ಅಂತರ್ ರಾಜ್ಯ ಪ್ರಯಾಣಿಕರನ್ನು ತಡೆದಿದ್ದರೆ ಕೊರೋನ ನಿಯಂತ್ರಣದಲ್ಲಿರುತ್ತಿತ್ತು: ಸಿಎಂ ಬಿಎಸ್‍ವೈ

ಬೆಂಗಳೂರು, ಜೂ. 18: ರಾಜ್ಯದಲ್ಲಿ ಕೊರೋನ ಪ್ರಕರಣಗಳು ಅಧಿಕವಾಗುತ್ತಿರುವುದು ವಾಸ್ತವವಾಗಿದ್ದು, ಹೊರ ರಾಜ್ಯಗಳಿಂದ ಬರುತ್ತಿರುವವರಲ್ಲಿ ಅಧಿಕ ಸಂಖ್ಯೆಯಲ್ಲಿ ಕೊರೋನ ಪ್ರಕರಣಗಳು ವರದಿಯಾಗಿವೆ. ಅಂತರ್ ರಾಜ್ಯ ಪ್ರಯಾಣಿಕರನ್ನು ತಡೆದಿದ್ದರೆ ರಾಜ್ಯದಲ್ಲಿ ಕೊರೋನ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿಂದು ಮಾಸ್ಕ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನ ಸೋಂಕನ್ನು ನಿಯಂತ್ರಿಸಲು ಸಾರ್ವಜನಿಕರು ಸರಕಾರದ ಜತೆ ಕೈಜೋಡಿಸಬೇಕು. ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೊರೋನ ನಿಯಂತ್ರಣಕ್ಕೆ ಶ್ರಮಿಸೋಣ ಎಂದರು.
ಸೋಂಕನ್ನು ನಿಯಂತ್ರಿಸಲು ಸರಕಾರ ಎಲ್ಲ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸರಕಾರದ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನ ಸೋಂಕು ತಡೆಯಲು ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಮಾಸ್ಕ್ ಧರಿಸಿದರೆ ಕೊರೋನವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಹೇಳಿದೆ. ಹಾಗಾಗಿ ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆಯನ್ನು ನಡೆಸಿದ್ದೇವೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೊರೋನ ವಿರುದ್ಧ ಹೋರಾಡಲು ಸಿದ್ಧರಾಗಬೇಕು. ಮಾಸ್ಕ್ ಧರಿಸಿ ವೈಯುಕ್ತಿಕ ಸ್ವಚ್ಛತೆಗೆ ಗಮನ ನೀಡಿದರೆ ಸೋಂಕು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಪ್ರತಿಯೊಬ್ಬರ ಮನೆ ಕಛೇರಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಆಗಾಗ್ಗೆ ಸೋಪಿನಿಂದ ಕೈ ತೊಳೆಯಬೇಕು. ಇದರಿಂದ ರೋಗದಿಂದ ದೂರವಾಗಬಹುದು ಎಂದು ನುಡಿದರು.
ಕೊರೋನ ನಿಯಂತ್ರಿಸಲು ವೈದ್ಯರು, ದಾದಿಯರು ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಹಾಗಾಗಿ ಇವರೆಲ್ಲರಿಗೂ ಸರಕಾರದಿಂದ ಅಭಿನಂದನೆ ಸಲ್ಲಿಸುವುದಾಗಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿಯಿಂದ ಕಬ್ಬನ್ ಪಾರ್ಕ್‍ವರೆಗೆ ಮಾಸ್ಕ್ ದಿನಾಚರಣೆ ಅಂಗವಾಗಿ ಕಾಲ್ನೆಡಿಗೆ ಜಾಥಾ ನಡೆಸಲಾಯಿತು.
ಈ ಜಾಥಾದಲ್ಲಿ ನಿವೃತ್ತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಗಿಣಿ ದಿವೇದಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ, ಸಚಿವರಾದ ಆರ್. ಅಶೋಕ್, ಡಾ. ಕೆ. ಸುಧಾಕರ್, ಸಿ.ಟಿ.ರವಿ, ಎಸ್.ಟಿ. ಸೋಮಶೇಖರ್, ಸಂಸದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಸೇರಿದಂತೆ ಹಲವು ಸಂಸದರು, ಶಾಸಕರು ಪಾಲ್ಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗೃತಿ ಜಾಥಾ ನಡೆಸಲಾಯಿತು.






.jpg)
.jpg)

