ಎಸಿಪಿ ಪ್ರಭುಶಂಕರ್ ವಿರುದ್ಧದ ಪ್ರಕರಣಕ್ಕೆ ನೀಡಿರುವ ತಡೆ ವಿಸ್ತರಿಸಿದ ಹೈಕೋರ್ಟ್
ಸಿಗರೇಟ್ ವ್ಯಾಪಾರಿಗಳ ಸುಲಿಗೆ ಆರೋಪ
ಬೆಂಗಳೂರು, ಜೂ.18: ಸಿಗರೇಟ್ ವ್ಯಾಪಾರಸ್ಥರಿಂದ ಲಂಚ ಕೇಳಿದ ಪ್ರಕರಣ ಸಂಬಂಧ ಎಸಿಪಿ ಪ್ರಭುಶಂಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಖಲಿಸಿರುವ 3 ಪ್ರತ್ಯೇಕ ಎಫ್‍ಐಆರ್‍ಗಳಿಗೆ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಜೂ.23ರವರೆಗೂ ವಿಸ್ತರಿಸಿ ಆದೇಶಿಸಿದೆ.
ಎಫ್‍ಐಆರ್ ರದ್ದು ಕೋರಿ ಪ್ರಭುಶಂಕರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು.
ಸರಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿದೆ.
ಅರ್ಜಿದಾರ ಪ್ರಭುಶಂಕರ್ ವಿರುದ್ಧ ಎಸಿಬಿ ದಾಖಲಿಸಿರುವ 3 ಎಫ್‍ಐಆರ್‍ಗಳಿಗೆ ಈ ಹಿಂದೆ ನೀಡಲಾಗಿರುವ ತಡೆಯಾಜ್ಞೆ ಆದೇಶವನ್ನು ಮುಂದಿನ ವಿಚಾರಣೆ ತನಕ ವಿಸ್ತರಿಸಲಾಗಿದೆ. ಅಲ್ಲದೆ, ಇದೇ ಪ್ರಕರಣ ಸಂಬಂಧ ಕಾಟನ್‍ಪೇಟೆ ಠಾಣೆಯ ಪೊಲೀಸರು ದಾಖಲಿಸಿರುವ 2 ಪ್ರತ್ಯೇಕ ಎಫ್ ಐಆರ್ ಗಳಿಗೂ ತಡೆ ನೀಡಲಾಗಿದೆ.
ಸುಲಿಗೆಗೆ ಒಳಗಾಗಿದ್ದ ಸಿಗರೇಟ್ ವ್ಯಾಪಾರಿ ಆದಿಲ್ ಎಂಬಾತ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಹಿರಿಯ ಅಧಿಕಾರಿಗಳ ವಿಚಾರಣೆ ವೇಳೆ ಸಿಗರೇಟ್ ವ್ಯಾಪಾರಸ್ಥರಿಂದ ಲಂಚ ಪಡೆದ ಆರೋಪ ಸಾಬೀತಾಗಿತ್ತು. ಇದಾದ ಬಳಿಕ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಆರೋಪಿತ ಅಧಿಕಾರಿಗಳ ಬಳಿಯಿಂದ 30 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.







