ಹರಿಪ್ರಸಾದ್, ನಸೀರ್ ಅಹಮದ್ ಆಯ್ಕೆ ಒಮ್ಮತದ ತೀರ್ಮಾನ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜೂ. 18: ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹಮದ್ ಅವರ ವಿದ್ಯಾರ್ಥಿ ನಾಯಕರಿಂದ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು. ಅವರ ಹಿರಿತನ ಹಾಗೂ ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಒಮ್ಮತದಿಂದ ಅವರನ್ನು ವಿಧಾನ ಪರಿಷತ್‍ಗೆ ಕಳುಹಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಪರಿಷತ್ ಎಂದರೆ ಹಿರಿಯರ ಮನೆ. ಪಕ್ಷ ಸಂಘಟನೆ ಹಾಗೂ ರಾಜ್ಯದ ಅನೇಕ ವಿಚಾರಗಳನ್ನು ಚರ್ಚೆ ಮಾಡಲು ಈ ಇಬ್ಬರು ಹಿರಿಯ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಲು ಒಮ್ಮತದ ತೀರ್ಮಾನ ಮಾಡಿದ್ದೇವೆ. ಮೇಲ್ಮನೆಗೆ ಸಾಕಷ್ಟು ಆಕಾಂಕ್ಷಿಗಳಿದ್ದರೂ, ಚುನಾವಣೆಗೆ ಸ್ಪರ್ಧಿಸಲು ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದರು.
ನಮಗೆ ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲು ಹಿರಿತನದ ಅಗತ್ಯವಿದ್ದು, ಅದಕ್ಕಾಗಿ ಈ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ನಾಯಕರಾಗಿ ಅನೇಕ ರಾಜ್ಯಗಳಲ್ಲಿ ಕೆಲಸ ಮಾಡುರುವ ಅನುಭವ ಹೊಂದಿದ್ದಾರೆ. 1983 ಹಾಗೂ 85ರಲ್ಲಿ ರಾಜಕೀಯ ಪ್ರವೇಶಿಸಿ, ವಿದ್ಯಾರ್ಥಿ ಘಟಕ, ಯುವ ಕಾಂಗ್ರೆಸ್, ಸೇವಾದಳ, ಎನ್‍ಎಸ್‍ಯುಐ ಸೇರಿ ಎಲ್ಲ ಘಟಕಗಳಲ್ಲಿಯೂ ಇರುವ ಕೆಲಸ ಮಾಡಿದ್ದಾರೆ. ಪಕ್ಷಕ್ಕೆ ಬಲ ತುಂಬುವ ಉದ್ದೇಶದಿಂದ ನಮ್ಮ ಮುಖಂಡರು ಚರ್ಚಿಸಿ ಹೈಕಮಾಂಡ್ ಈ ಹಿರಿಯರಿಗೆ ಅವಕಾಶ ನೀಡಿದೆ ಎಂದರು.







