ಬೆಂಗಳೂರು: ವೈದ್ಯರ ಹನಿಟ್ರ್ಯಾಪ್ ಆರೋಪ; ಯುವತಿ ಸೇರಿ ಮೂವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.19: ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ಆರೋಪದಡಿ ಯುವತಿ ಸೇರಿ ಮೂವರನ್ನು ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮೈಕೋಲೇಔಟ್ನ 9ನೇ ಮುಖ್ಯ ರಸ್ತೆಯ ಚಾಂದಿನಿ(22), ಕೋಣನಕುಂಟೆಯ, 2ನೇ ಕ್ರಾಸ್ ನಿವಾಸಿ ಪ್ರಜ್ವಲ್(26) ಹಾಗೂ ಸಿಂಗಸಂದ್ರದ ಜಿ.ಕೆ.ಲೇಔಟ್ನ ಅನಿರುದ್ಧ(23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ನಲ್ಲಿ ವೈದ್ಯನಿಗೆ ಆರೋಪಿ ಚಾಂದಿನಿ ಪರಿಚಿತಳಾಗಿದ್ದು, ಬಳಿಕ ಇಬ್ಬರೂ ಸ್ನೇಹಿತರಾಗಿದ್ದಾರೆ. ಜೂ.13ರಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಹೋಟೆಲ್ ವೊಂದರಲ್ಲಿ ಊಟ ಮಾಡಿದ ಈ ಇಬ್ಬರು, ಇಲ್ಲಿನ ಯಲಹಂಕ ಪ್ರಕೃತಿ ನಗರದ ಚಾಂದಿನಿ ಮನೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಏಕಾಏಕಿ ಇನ್ನಿಬ್ಬರು ಮನೆಗೆ ಬಂದು, ನೀವಿಬ್ಬರು ಒಟ್ಟಿಗೆ ಇರುವ ಖಾಸಗಿ ದೃಶ್ಯಗಳು ನಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. 10 ಲಕ್ಷ ರೂ. ಹಣ ಕೊಡದಿದ್ದರೆ ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಇಲ್ಲಿನ ಯಲಹಂಕ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.