ಎಸೆಸೆಲ್ಸಿ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ: ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

ಬೆಳಗಾವಿ, ಜೂ.19: ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ವಾಟಾಳ್ ನಾಗರಾಜ್‍ರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಪರೀಕ್ಷೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಧರಣಿ ಕೊಡಲು ನಿರ್ಧರಿಸಿದ್ದರು. ಆದರೆ, ಸುವರ್ಣಸೌಧಕ್ಕೆ ಬರುವ ಮುಂಚೆಯೇ ವಾಟಾಳ್ ನಾಗರಾಜ ಅವರನ್ನು ಹಿರೇಬಾಗೇವಾಡಿ ಬಳಿಯ ಟೋಲ್‍ಗೇಟ್ ಸಮೀಪ ಪೊಲೀಸರು ವಶಕ್ಕೆ ಪಡೆದರು.
ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿಯೂ ಪರೀಕ್ಷೆಯನ್ನು ಸರಕಾರ ರದ್ದುಪಡಿಸಬೇಕೆಂದು ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಿದ್ದರು. ಇಂದು ಪ್ರತಿಭಟನೆಗೆ ಸುವರ್ಣಸೌಧಕ್ಕೆ ಬರುವ ಮುಂಚೆಯೇ ಮಾರ್ಗಮಧ್ಯದಲ್ಲಿ ಅವರನ್ನು ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೊರೋನ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದ್ದು, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಬಾರದು ಎಂದು ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಆದರೆ, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.







