ಪೊಲೀಸರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲು ಸರಕಾರ ಬದ್ಧ: ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ. 19: ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಇಂದಿಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪೊಲೀಸ್ ವಸತಿಗೃಹಗಳು, ಸಂಚಾರ ಪೊಲೀಸ್ ಠಾಣೆ, ವೈರ್ ಲೆಸ್ ತರಬೇತಿ ಶಾಲೆಗಳನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಣದ ಹಂಗು ತೊರೆದು ಜನರ ಸೇವೆ ಮಾಡುವ ಪೊಲೀಸ್ ಸಿಬ್ಬಂದಿಯ ಯೋಗಕ್ಷೇಮ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಸಿಬ್ಬಂದಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಘೋಷಿಸಿದರು.
ಮಾರಕ ಕೊರೋನ ಸೋಂಕಿನ ಸಂದರ್ಭದಲ್ಲಿಯೂ ಪೊಲೀಸ್ ಸಿಬ್ಬಂದಿ ತಮಗೆ ಸೋಂಕು ತಗುಲುವ ಭೀತಿ ಇದ್ದರೂ ಅದನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಸಿಬ್ಬಂದಿ ನೆರವು ನೀಡಿದ್ದಾರೆ. ಹೀಗಾಗಿ ರಾಜ್ಯದ ಜನತೆ ಪರವಾಗಿ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಯಡಿಯೂರಪ್ಪ ತಿಳಿಸಿದರು.
ಗುಣಮಟ್ಟದಿಂದ ಕೂಡಿವೆ: ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳ ಕಾಮಗಾರಿ ತಮಗೆ ಅತ್ಯಂತ ತೃಪ್ತಿ ತಂದಿದೆ. ಸ್ವಂತ ಮನೆಗಳಿಗಿಂತ ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,035 ವಸತಿ ಗೃಹಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಆ ಪೈಕಿ ಬಿನ್ನಿಮಿಲ್, ಕೆಂಗೇರಿಗಳಲ್ಲಿನ 646 ವಸತಿ ಗೃಹಗಳ ಪೈಕಿ 450 ವಸತಿ ಗೃಹಗಳನ್ನು ಉದ್ಘಾಟಿಸಲಾಗಿದೆ ಎಂದರು.
ವಸತಿ ಗೃಹಗಳನ್ನು ಪೊಲೀಸ್ ಸಿಬ್ಬಂದಿಗೆ ಜೇಷ್ಠತೆ ಪಟ್ಟಿ ಆಧರಿಸಿ ಹಂಚಿಕೆ ಮಾಡಲಾಗುವುದು. ಎಲ್ಲ ವಸತಿ ಗೃಹಗಳ ಕಾಮಗಾರಿ ಪೂರ್ಣಗೊಂಡರೆ ಒಟ್ಟು 8,357 ವಸತಿ ಗೃಹಗಳು ಪೊಲೀಸ್ ಸಿಬ್ಬಂದಿಗೆ ದೊರೆಯಲಿವೆ ಎಂದ ಅವರು, ಪೊಲೀಸ್ ಪಡೆಗೆ ಆಧುನಿಕ ತಂತ್ರಜ್ಞಾನ ಒದಗಿಸುವ ನಿಟ್ಟಿನಲ್ಲಿ ವೈರ್ ಲೆಸ್ ತರಬೇತಿ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಆರಂಭದಲ್ಲಿ ಸಿಎಂ ಯಡಿಯೂರಪ್ಪ, ಮಹಿಳಾ ಪೊಲೀಸ್ ಸಿಬ್ಬಂದಿಗೆ ಸಾಂಕೇತಿಕವಾಗಿ ನೂತನ ವಸತಿ ಗೃಹದ ಬೀಗದ ಕೈಯನ್ನು ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಜರಿದ್ದರು.






.jpg)
.jpg)

