ಪತ್ರಿಕಾ,ವಾಕ್ ಸ್ವಾತಂತ್ರ್ಯ ಬೆದರಿಕೆ ಎದುರಿಸುತ್ತಿದೆ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮದನ್ ಲೋಕುರ್
ಪ್ರಧಾನಿ ಕ್ಷೇತ್ರದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ ವಿರುದ್ಧ ಎಫ್ಐಆರ್
ಫೈಲ್ ಚಿತ್ರ
ಹೊಸದಿಲ್ಲಿ,ಜೂ.19: ಕೊರೋನ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಪ್ರಕಟಿಸಿದ್ದ ‘Scroll.in’ ಸುದ್ದಿ ಜಾಲತಾಣದ ಕಾರ್ಯ ನಿರ್ವಾಹಕ ಸಂಪಾದಕಿ ಸುಪ್ರಿಯಾ ಶರ್ಮಾ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ಪತ್ರಕರ್ತರು ಮತ್ತು ಪತ್ರಿಕಾ ಸ್ವಾತಂತ್ರ್ಯಪರ ಸಂಘಟನೆಗಳು ಬಲವಾಗಿ ಖಂಡಿಸಿದ್ದು,ಶರ್ಮಾ ಅವರಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿವೆ.
ವಾರಣಾಸಿ ಜಿಲ್ಲೆಯಲ್ಲಿ ಲಾಕ್ಡೌನ್ನ ಪರಿಣಾಮಗಳ ಕುರಿತು ಸರಣಿಯ ಭಾಗವಾಗಿ ಶರ್ಮಾ ಜೂ.5ರಂದು ಡೋಮರಿ ಗ್ರಾಮದ ಮಾಲಾದೇವಿ ಎಂಬಾಕೆಯನ್ನು ಸಂದರ್ಶಿಸಿದ್ದರು. ಡೋಮರಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಮೋದಿಯವರು ದತ್ತು ಸ್ವೀಕರಿಸಿದ್ದಾರೆ. ತಾನು ಇತರರ ಮನೆಗೆಲಸ ಮಾಡಿಕೊಂಡಿದ್ದು,ತನ್ನ ಬಳಿ ಪಡಿತರ ಚೀಟಿ ಇಲ್ಲದ್ದರಿಂದ ಲಾಕ್ಡೌನ್ ಅವಧಿಯಲ್ಲಿ ಆಹಾರಕ್ಕಾಗಿ ಒದ್ದಾಡಿದ್ದೆ ಎಂದು ಮಾಲಾದೇವಿ ಸಂದರ್ಶನದಲ್ಲಿ ಹೇಳಿದ್ದಳು.
‘ಪ್ರಧಾನಿ ಮೋದಿ ದತ್ತು ಪಡೆದಿರುವ ವಾರಣಾಸಿಯ ಗ್ರಾಮದ ಜನರಿಗೆ ಲಾಕ್ಡೌನ್ನಲ್ಲಿ ಆಹಾರದ ಕೊರತೆಯಿತ್ತು ’ ಎಂಬ ಶೀರ್ಷಿಕೆಯ ವರದಿಯಲ್ಲಿ Scroll.in ಮಾಲಾದೇವಿಯ ಹೇಳಿಕೆಗಳನ್ನು ಯಥಾವತ್ತಾಗಿ ಪ್ರಕಟಿಸಿತ್ತು. ಈಗ ತನ್ನ ಹೇಳಿಕೆಗಳನ್ನು ಅಲ್ಲಗಳೆದಿರುವ ಮಾಲಾದೇವಿಯ ದೂರಿನ ಆಧಾರದಲ್ಲಿ ವಾರಣಾಸಿಯ ರಾಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಸುದ್ದಿ ಜಾಲತಾಣದ ಮುಖ್ಯ ಸಂಪಾದಕರನ್ನೂ ಹೆಸರಿಸಲಾಗಿದೆ.
ಪ್ರಧಾನಿಯವರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಕೆಲಸ ಮಾಡಿದ್ದಕ್ಕಾಗಿ ಪತ್ರಕರ್ತೆಯ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮವನ್ನು ಆರಂಭಿಸಿರುವುದು ಸ್ಪಷ್ಟ ಬೆದರಿಕೆಯ ತಂತ್ರವಾಗಿದೆ ಮತ್ತು ದೇಶಾದ್ಯಂತ ಪತ್ರಕರ್ತರನ್ನು ಹೆದರಿಸುವ ಸಂದೇಶವನ್ನು ರವಾನಿಸಿದೆ ಎಂದು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಕಾವಲು ಸಂಘಟನೆಯಾಗಿರುವ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಹೇಳಿದ್ದರೆ, ಎಫ್ಐಆರ್ ಶರ್ಮಾ ಅವರಿಗೆ ಬೆದರಿಕೆಯೊಡ್ಡುವ ಪ್ರಯತ್ನವಾಗಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಹೇಳಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ್ ಲೋಕುರ್ ಅವರು, ಎಫ್ಐಆರ್ ದಾಖಲಾಗಿರುವುದು ದುರದೃಷ್ಟಕರ. ಪತ್ರಿಕಾ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಹೇಳಿದರು.
ಮಾಲಾದೇವಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ,ಶರ್ಮಾ ತನ್ನ ಹೇಳಿಕೆಗಳು ಮತ್ತು ಗುರುತನ್ನು ತಿರುಚಿದ್ದಾರೆ. ತಾನು ಮನೆಗೆಲಸದಾಳಲ್ಲ, ಗುತ್ತಿಗೆ ಆಧಾರದಲ್ಲಿ ವಾರಣಾಸಿ ನಗರಸಭೆಯಲ್ಲಿ ಸ್ವಚ್ಛತಾ ಉದ್ಯೋಗಿಯಾಗಿದ್ದೇನೆ. ಲಾಕ್ಡೌನ್ ಅವಧಿಯಲ್ಲಿ ತಾನಾಗಲೀ ತನ್ನ ಕುಟುಂಬ ಸದಸ್ಯರಾಗಲೀ ಯಾವುದೇ ಸಮಸ್ಯೆ ಎದುರಿಸಿರಲಿಲ್ಲ. ತಾನು ಮತ್ತು ತನ್ನ ಮಕ್ಕಳು ಉಪವಾಸವಿದ್ದರೆಂದು ಹೇಳುವ ಮೂಲಕ ಸುಪ್ರಿಯಾ ಶರ್ಮಾ ತನ್ನ ಬಡತನ ಮತ್ತು ಜಾತಿಯನ್ನು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.