ದ.ಕ. ದಲ್ಲಿ ಮತ್ತೆ 13 ಮಂದಿಗೆ ಕೊರೋನ ಸೋಂಕು : ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ 30 ಮಂದಿ ಗುಣಮುಖ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 422ಕ್ಕೇರಿಕೆ
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶುಕ್ರವಾರವೂ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಮತ್ತೆ 13 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 422ಕ್ಕೆ ಏರಿಕೆಯಾಗಿದ್ದು, ಈ ಪೈಕಿ 10 ಮಂದಿ ಹೊರ ಜಿಲ್ಲೆಯವರು. ಈ ನಡುವೆ 30 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
13 ಸೋಂಕಿತರ ಪೈಕಿ ಜೂ.16ರಂದು ಶಾರ್ಜಾದಿಂದ ಏಳು ಮಂದಿ, ಜೂ.11ರಂದು ಸೌದಿ ಅರೇಬಿಯದಿಂದ ನಾಲ್ವರು ವಾಪಸಾಗಿದ್ದರು. ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಗಂಟಲು ದ್ರವ ಮಾದರಿಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
22 ಮತ್ತು 78 ವರ್ಷದ ವೃದ್ಧರು ಮಂಗಳೂರಿನವರಾಗಿದ್ದು, ‘ಇನ್ಫ್ಲೂಯೆಂಝಾ ಲೈಕ್ ಇಲ್ನೆಸ್’ ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
30 ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಶುಕ್ರವಾರ 30 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿ ದ್ದಾರೆ. ಈ ಪೈಕಿ ಒಂದು ವರ್ಷದ ಎರಡು ಮಕ್ಕಳು, ಎರಡು ವರ್ಷದ ಮಗು ಹಾಗೂ 16 ವರ್ಷದ ಬಾಲಕ ಗುಣಮುಖರಾಗಿದ್ದಾರೆ. ಇದರೊಂದಿಗೆ 206 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.
ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ 70 ವರ್ಷದ ವ್ಯಕ್ತಿಯೊಬ್ಬರು ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ 52 ವರ್ಷ ವಯಸ್ಸಿನ ವ್ಯಕ್ತಿ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದಾರೆ.
ಶುಕ್ರವಾರ ಒಟ್ಟು 118 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 13 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 147 ಮಂದಿಯ ಸ್ಯಾಂಪಲ್ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 60 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.