ದೇಶಾದ್ಯಂತ ಕೊರೋನ ವೈರಸ್ ಪರೀಕ್ಷೆಗೆ ಏಕರೂಪದ ಶುಲ್ಕ ವಿಧಿಸಲು ಸುಪ್ರೀಂ ಸೂಚನೆ
ಹೊಸದಿಲ್ಲಿ,ಜೂ.19: ವಿವಿಧ ರಾಜ್ಯಗಳಲ್ಲಿ ಕೊರೋನ ವೈರಸ್ ಪರೀಕ್ಷಾ ಶುಲ್ಕಗಳಲ್ಲಿ ವ್ಯತ್ಯಾಸಗಳಿರುವುದನ್ನು ಶುಕ್ರವಾರ ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯವು,ಈ ಪರೀಕ್ಷಾ ಶುಲ್ಕಗಳಿಗೆ ಗರಿಷ್ಠ ಮಿತಿಯೊಂದನ್ನು ನಿಗದಿಗೊಳಿಸುವಂತೆ ಕೇಂದ್ರಕ್ಕೆ ಸೂಚಿಸಿತು.
ಕೊರೋನ ವೈರಸ್ ಪರೀಕ್ಷೆಗೆ ಎಲ್ಲ ರಾಜ್ಯಗಳಲ್ಲಿ ಏಕರೂಪದ ಶುಲ್ಕವಿರಬೇಕು. ಕೆಲವು ರಾಜ್ಯಗಳಲ್ಲಿ 2,200 ರೂ ಮತ್ತು ಇನ್ನು ಕೆಲವು ರಾಜ್ಯಗಳಲ್ಲಿ 4,500 ರೂ.ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅಶೋಕ ಭೂಷಣ್, ಎಸ್.ಕೆ.ಕೌಲ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠವು, ಆದರೆ ನ್ಯಾಯಾಲಯವು ಶುಲ್ಕಗಳನ್ನು ನಿಗದಿಗೊಳಿಸುವ ಗೋಜಿಗೆ ಹೋಗುವುದಿಲ್ಲ ಮತ್ತು ಅದನ್ನು ಸರಕಾರವು ನೋಡಿಕೊಳ್ಳಲಿದೆ ಎಂದು ಹೇಳಿತು.
ಸರಕಾರದ ಪರ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಗರಿಷ್ಠ ಮಿತಿಯನ್ನು ನಿಗದಿಗೊಳಿಸುವುದನ್ನು ರಾಜ್ಯಗಳಿಗೆ ಬಿಡಬೇಕು. ಕೆಲವು ರಾಜ್ಯಗಳು ಇನ್ನೂ ಕಡಿಮೆ ಶುಲ್ಕಗಳ ಬಗ್ಗೆ ಚರ್ಚಿಸುತ್ತಿರಬಹುದು ಎಂದು ನ್ಯಾಯಾಲಯವನ್ನು ಕೋರಿದರು.
ಆದರೆ ಅವರ ಕೋರಿಕೆಯನ್ನು ತಳ್ಳಿಹಾಕಿದ ಪೀಠವು,ಕೇಂದ್ರವು ಗರಿಷ್ಠ ಮಿತಿಯನ್ನು ನಿಗದಿಗೊಳಿಸಲಿ,ಉಳಿದದ್ದನ್ನು ರಾಜ್ಯಗಳು ಮಾಡುತ್ತವೆ ಎಂದು ಹೇಳಿತು.
ಕಳೆದ ತಿಂಗಳು ಟೆಸ್ಟಿಂಗ್ ಕಿಟ್‌ಗಳ ಬೆಲೆಗಳು ಇಳಿದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಕೊರೋನ ವೈರಸ್ ಪರೀಕ್ಷೆಗೆ 4,500 ರೂ.ಗಳ ಗರಿಷ್ಠ ಶುಲ್ಕದ ಮಿತಿಯನ್ನು ತೆಗೆದುಹಾಕಿತ್ತು. ಖಾಸಗಿ ಲ್ಯಾಬ್‌ಗಳಲ್ಲಿ ಸ್ಯಾಂಪಲ್‌ಗಳ ಪರೀಕ್ಷೆಗೆ ಪರಸ್ಪರ ಸಹಮತದ ದರಗಳನ್ನು ನಿಗದಿಗೊಳಿಸುವಂತೆಯೂ ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು.
ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ ಮತ್ತು ದಿಲ್ಲಿ ಸೇರಿದಂತೆ ಹಲವು ರಾಜ್ಯಗಳು ಐಸಿಎಂಆರ್ ಸೂಚನೆಯ ಬಳಿಕ ಪರೀಕ್ಷಾ ದರಗಳನ್ನು ತಗ್ಗಿಸಿದ್ದರೆ,ಇತರ ರಾಜ್ಯಗಳು ದರ ಪರಿಷ್ಕರಣೆಯನ್ನು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.
ಕೇಂದ್ರ ಗೃಹಸಚಿವಾಲಯವು ದಿಲ್ಲಿಯಲ್ಲಿ 4,500 ರೂ.ಗಳ ಗರಿಷ್ಠ ಮಿತಿಯನ್ನು ಬುಧವಾರ 2,400 ರೂ.ಗಳಿಗೆ ಪರಿಷ್ಕರಿಸಿದೆ. ನೆರೆಯ ಉತ್ತರ ಪ್ರದೇಶವು ಆರ್‌ಟಿ-ಪಿಸಿಆರ್ ವಿಧಾನದ ಮೂಲಕ ಕೊರೋನ ವೈರಸ್ ಪರೀಕ್ಷೆಗೆ 2,500 ರೂ.ಗಳ ಗರಿಷ್ಠ ಶುಲ್ಕವನ್ನು ನಿಗದಿಗೊಳಿಸಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಸರಕಾರಗಳು ಗರಿಷ್ಠ ಶುಲ್ಕವನ್ನು 2,200 ರೂ.ಗಳಿಗೆ ನಿಗದಿಗೊಳಿಸಿವೆ.