ವಿಧಾನಪರಿಷತ್ ಚುನಾವಣೆ: ಮೂರು ಪಕ್ಷಗಳ ಅಭ್ಯರ್ಥಿಗಳ ಅವಿರೋಧ ಆಯ್ಕೆ ಖಚಿತ

ಬಿಜೆಪಿ ಸದಸ್ಯರು (ಎಂಟಿಬಿ-ಆರ್.ಶಂಕರ್-ಪ್ರತಾಪ್ ಸಿಂಹ ನಾಯಕ್- ಸುನಿಲ್ ವಲ್ಯಾಪುರೆ)
ಬೆಂಗಳೂರು, ಜೂ. 19: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇದೇ ತಿಂಗಳ 29ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿಯ ನಾಲ್ಕು, ಕಾಂಗ್ರೆಸ್ನ ಇಬ್ಬರು ಹಾಗೂ ಜೆಡಿಎಸ್ನ ಓರ್ವ ಅಭ್ಯರ್ಥಿ ಸೇರಿದಂತೆ ಏಳು ಮಂದಿಯ ನಾಮಪತ್ರ ಪರಿಶೀಲನೆ ನಡೆಸಿದ್ದು, ಕ್ರಮಬದ್ಧವಾಗಿವೆ.
ಬಿಜೆಪಿಯ ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್, ನಸೀರ್ ಅಹ್ಮದ್ ಹಾಗೂ ಜೆಡಿಎಸ್ನ ಇಂಚರ ಗೋವಿಂದ ರಾಜು ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ.ನಾಗರಾಜ್ ಮತ್ತು ಪಿ.ಸಿ.ಕೃಷ್ಟೇಗೌಡ ಅವರ ನಾಮಪತ್ರಗಳು ಸೂಚಕರಾಗಿ ಶಾಸಕರ ಸಹಿ ಇಲ್ಲದ ಕಾರಣಕ್ಕೆ ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಮಾಹಿತಿ ನೀಡಿದ್ದಾರೆ.

ಏಳು ಸ್ಥಾನಗಳಿಗೆ 7 ಮಂದಿಯಷ್ಟೇ ಉಮೇದುವಾರಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜೂ.22ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅಂದು ಸಂಜೆ ರಾಜ್ಯಸಭೆ ಮಾದರಿಯಲ್ಲೆ ಯಾವುದೇ ಚುನಾವಣೆ ಇಲ್ಲದೆ ಏಳು ಮಂದಿಗಳ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.







