ಅವಮಾನಕಾರಿ ಹೇಳಿಕೆ ಆರೋಪ: ಭೀಮ್ ಆರ್ಮಿ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗದ ಸೂಚನೆ

ಹೊಸದಿಲ್ಲಿ,ಜೂ.19: ಮಹಿಳೆಯರ ವಿರುದ್ಧ ಅವಮಾನಕಾರಿ ಮತ್ತು ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು)ವು ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದೆ.
ಮಹಿಳೆಯರ ವಿರುದ್ಧ ಅವಮಾನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿರುವ ಆಝಾದ್ ಅವರ ಟ್ವೀಟ್‌ಗಳನ್ನು ತಾನು ಗಮನಿಸಿದ್ದೇನೆ. ಸೈಬರ್ ಕಿರುಕುಳಗಳು ಹೆಚ್ಚುತ್ತಿದ್ದು, ಮಹಿಳೆಯರ ವಿರುದ್ಧ ಇಂತಹ ಹೇಳಿಕೆ ನೀಡುವುದು ಗಂಭೀರ ಅಪರಾಧವಾಗಿದೆ ಎಂದು ಎನ್‌ಸಿಡಬ್ಲು ಅಧ್ಯಕ್ಷೆ ರೇಖಾ ಶರ್ಮಾ ಅವರು ಉ.ಪ್ರದೇಶದ ಡಿಜಿಪಿ ಎಚ್.ಸಿ.ಅವಸ್ಥಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಟ್ವೀಟ್‌ಗಳನ್ನು ತಾನು ಮಾಡಿರಲಿಲ್ಲ,ಆ ಸಮಯದಲ್ಲಿ ತಾನು ಜೈಲಿನಲ್ಲಿದ್ದೆ ಎಂದು ಆಝಾದ್ ಸ್ಪಷ್ಟಪಡಿಸಿದ್ದಾರೆ.
‘ಮಹಿಳೆಯರ ವಿರುದ್ಧ ದ್ವೇಷಭಾಷಣದ ಕೆಲವು ಟ್ವೀಟ್‌ಗಳು ನನ್ನ ಟ್ವಿಟರ್ ಖಾತೆಯಿಂದ ವೈರಲ್ ಆಗುತ್ತಿವೆ. ಸಹಾರನ್‌ಪುರ ಹಿಂಸಾಚಾರ ಪ್ರಕರಣದಲ್ಲಿ 2017,ಜೂನ್ 8ರಿಂದ 2018,ಸೆಪ್ಟೆಂಬರ್ 14ರವರೆಗೆ ನಾನು ಜೈಲಿನಲ್ಲಿದ್ದೆ. ಈ ಟ್ವೀಟ್‌ಗಳು ಈ ಅವಧಿಗೆ ಸಂಬಂಧಿಸಿದ್ದು,ನನಗೆ ಅವುಗಳ ಬಗ್ಗೆ ಗೊತ್ತಿಲ್ಲ. ಉಲ್ಲೇಖಿತ ಟ್ವೀಟ್‌ಗಳನ್ನು ಮಾಡಿರುವ ಟ್ವಿಟರ್ ಖಾತೆ 2018,ಫೆಬ್ರವರಿಯಲ್ಲಿ ಆರಂಭವಾಗಿದ್ದು,2018 ಸೆಪ್ಟೆಂಬರ್‌ನಲ್ಲಿ ನನ್ನ ಬಿಡುಗಡೆಯಾಗಿತ್ತು. ಕೆಲವು ಕಾರ್ಯಕರ್ತರು ನನಗೆ ಈ ಖಾತೆಯ ಬಗ್ಗೆ ಮಾಹಿತಿ ನೀಡಿದ್ದರು. ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸೈನಿಕನಾಗಿದ್ದು,ಮಹಿಳೆಯರನ್ನು ಬಹುವಾಗಿ ಗೌರವಿಸುತ್ತೇನೆ ’ಎಂದು ಅವರು ಟ್ವೀಟಿಸಿದ್ದಾರೆ.







