ಚಿಕ್ಕಮಗಳೂರು: ಕೊರೋನದಿಂದ ಮೃತಪಟ್ಟ ವೃದ್ಧೆಯ ಮಗನಿಗೂ ಸೋಂಕು ದೃಢ

ಅಪರ ಜಿಲ್ಲಾಧಿಕಾರಿ ಡಾ.ಕುಮಾರ್
ಚಿಕ್ಕಮಗಳೂರು, ಜೂ.19: ಕೊರೋನ ಸೋಂಕಿನಿಂದಾಗಿ ಗುರುವಾರ ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಮೃತಪಟ್ಟ 72 ವರ್ಷದ ವೃದ್ಧೆಯ 36 ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಲಾಗಿದೆ. ಈ ಪ್ರಾಥಮಿಕ ಸಂಪರ್ಕಗಳ ಪೈಕಿ ವೃದ್ಧೆಯ ಮಗನಲ್ಲಿ ಕೊರೋನ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಚಿಕ್ಕಮಗಳೂರು ನಗರದ ಕೊರೋನ ಚಿಕಿತ್ಸಾ ಘಟಕದಲ್ಲಿ ಮೃತಪಟ್ಟಿರುವ ಅಜ್ಜಂಪುರ ತಾಲೂಕು ಡಣಾಯಕಾಪುರ ಗ್ರಾಮದ 72 ವರ್ಷದ ವೃದ್ಧೆ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ವೃದ್ಧೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಮಗಳ ಮನೆಗೆ ಹೋಗಿದ್ದ ವೇಳೆ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದರು.
ಜಿಲ್ಲಾಡಳಿತ ಸೋಂಕಿನಿಂದ ಮೃತಪಟ್ಟಿರುವ ವೃದ್ಧೆಯ 36 ಪ್ರಾಥಮಿಕ ಸಂಪರ್ಕಗಳನ್ನು ಈಗಾಗಲೇ ಪತ್ತೆ ಮಾಡಿದೆ. 36 ಪ್ರಾಥಮಿಕ ಸಂಪರ್ಕಗಳ ಪೈಕಿ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನಲ್ಲಿ 12 ಮಂದಿಯನ್ನು ಗುರುತಿಸಲಾಗಿದ್ದು, 24 ಮಂದಿ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ. ಚಿಕ್ಕಮಗಳೂರಿನ 24 ಪ್ರಾಥಮಿಕ ಸಂಪರ್ಕಗಳ ಪೈಕಿ ಬೀರೂರಿನವರು 12 ಮಂದಿ, ಅಜ್ಜಂಪುರದವರು 8 ಮಂದಿ ಇದ್ದಾರೆ, ಉಳಿದ ನಾಲ್ಕು ಮಂದಿ ವೃದ್ಧೆಯ ಮಕ್ಕಳು ಮತ್ತು ಸೊಸೆಯಂದಿರಾಗಿದ್ದಾರೆ ಎಂದು ಡಾ.ಕುಮಾರ್ ತಿಳಿಸಿದರು.
ಸೋಂಕಿನಿಂದ ಮೃತಪಟ್ಟಿರುವ ವೃದ್ಧೆ ಈ ಹಿಂದೆ ಚನ್ನಗಿರಿಯ ಮಗಳ ಮನೆಯಿಂದ ಅಜ್ಜಂಪುರ ತಾಲೂಕಿನ ಡಣಾಯಕಪುರ ಗ್ರಾಮಕ್ಕೆ ಹಿಂದಿರುಗಿದಾದ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿದೆ. ಕುಟುಂಬಸ್ಥರು ಅವರನ್ನು ಬೀರೂರು, ಅಜ್ಜಂಪುರ ಪಟ್ಟಣಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುರುತಿಸಲಾಗಿರುವ ವೃದ್ಧೆಯ 24 ಪ್ರಾಥಮಿಕ ಸಂಪರ್ಕಗಳಲ್ಲಿ 20 ಮಂದಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ ಎಂದು ಎಡಿಸಿ ತಿಳಿಸಿದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ವೃದ್ಧೆಯ ಪ್ರಾಥಮಿಕ ಸಂಪರ್ಕಗಳಾದ 24 ಮಂದಿಯ ರಕ್ತ ಹಾಗೂ ಗಂಟಲ ದ್ರವದ ಮಾದರಿಯನ್ನು ಕೊರೋನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ವೃದ್ಧೆಯ 52 ವರ್ಷದ ಮಗನ ಪ್ರಯೋಗಾಲಯದ ವರದಿಯಲ್ಲೂ ಪಾಸಿಟಿವ್ ಇರುವುದು ಗುರುವಾರವೇ ಬೆಳಕಿಗೆ ಬಂದಿದ್ದು, ಇವರನ್ನು ಚಿಕ್ಕಮಗಳೂರು ನಗರದ ಕೊರೋನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ವೃದ್ಧೆಯ ಮಗನಲ್ಲೂ ಪಾಸಿಟಿವ್ ಇರುವುದು ಪತ್ತೆಯಾಗಿರುವುದರಿಂದ ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಗಳನ್ನು ಪತ್ತೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಮಾಹಿತಿ ನೀಡಿದರು.
ವೃದ್ಧೆಯ ಪ್ರಾಥಮಿಕ ಸಂಪರ್ಕಗಳ ಪೈಕಿ 12 ಮಂದಿ ಚನ್ನಗಿರಿ ತಾಲೂಕಿನವರಾಗಿದ್ದು, ಅವರ ಬಗ್ಗೆ ದಾವಣಗೆರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಪರ್ಕಗಳ ಬಗ್ಗೆ ಅಲ್ಲಿನ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದ ಅವರು, ಸೋಂಕಿನಿಂದ ಮೃತಪಟ್ಟಿರುವ ವೃದ್ಧೆಯ ವಾಸವಿದ್ದ ಗ್ರಾಮವನ್ನು ಸೀಲ್ಡೌನ್ ಮಾಡಿಲ್ಲ ಎಂದು ಇದೇ ವೇಳೆ ಡಾ.ಕುಮಾರ್ ತಿಳಿಸಿದರು.
ಗುರುವಾರ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕೊರೋನ ಚಿಕಿತ್ಸಾ ಘಟಕದಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಅಜ್ಜಂಪುರ ತಾಲೂಕು ಡಣಾಯಕಾಪುರ ಗ್ರಾಮದ ವೃದ್ಧೆ ಇತ್ತೀಚೆಗೆ ಚನ್ನಗಿರಿಯಲ್ಲಿರುವ ತನ್ನ ಮಗಳ ಮನೆಗೆ ಭೇಟಿ ನೀಡಿ ಸ್ವಗ್ರಾಮಕ್ಕೆ ಹಿಂದಿರುಗಿದ್ದರು. ಈ ವೇಳೆ ವೃದ್ಧೆಗೆ ಜ್ವರ ಹಾಗೂ ಮೂತ್ರಪಿಂಡದ ಸಮಸ್ಯೆ ಎದುರಾಗಿತ್ತು. ಕುಟುಂಬಸ್ಥರು ಕೂಡಲೇ ಅವರನ್ನು ಬೀರೂರು ಹಾಗೂ ಅಜ್ಜಂಪುರ ಪಟ್ಟಣಗಳಲ್ಲಿರುವ ಎರಡು ಆಸ್ಪತ್ರೆಯ ವೈದ್ಯರಿಗೆ ತೋರಿಸಿದ್ದರು. ಈ ಮಧ್ಯೆ ವೃದ್ಧೆಗೆ ಜ್ವರ ಇದ್ದ ಪರಿಣಾಮ ಅವರ ರಕ್ತ ಹಾಗೂ ಗಂಟಲದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಇದ್ದ ಪರಿಣಾಮ ಕಳದ ಬುಧವಾರ ಸಂಜೆ ವೃದ್ಧೆಯನ್ನು ಚಿಕ್ಕಮಗಳೂರಿನ ಕೊರೋನ ಆಸ್ಪತ್ರೆಗೆ ಕರೆತರಲಾಗಿದ್ದು, ಗುರುವಾರ ಮಧ್ಯಾಹ್ನ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ವೃದ್ಧೆ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 24 ಮಂದಿ ವೃದ್ಧೆಯ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ 20 ಮಂದಿ ಬೀರೂರು ಹಾಗೂ ಅಜ್ಜಂಪುರ ಪಟ್ಟಣಗಳಲ್ಲಿ ವೃದ್ಧೆಯನ್ನು ತಪಾಸಣೆ ಮಾಡಿದ್ದ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಮೃತ ವೃದ್ಧೆಯ ಶವವನ್ನು ಆಸ್ಪತ್ರೆ ಸಿಬ್ಬಂದಿ ಗುರುವಾರ ರಾತ್ರಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ವೃದ್ಧೆಯ ಪ್ರಕರಣದಿಂದಾಗಿ ಅಜ್ಜಂಪುರ, ಬೀರೂರು ಪಟ್ಟಣ ಸೇರಿದಂತೆ ವೃದ್ಧೆಯ ಗ್ರಾಮದಲ್ಲಿ ಜನರು ಆತಂಕಕ್ಕೊಳಗಾಗಿದ್ದಾರೆಂದು ತಿಳಿದು ಬಂದಿದೆ.







