ಉಡುಪಿ: ಕೊರೋನ ನಿಯಂತ್ರಣಕ್ಕೆ ಅಣಿಯಾಗುತ್ತಿರುವ ವಿಶೇಷ ಆಟೋ ರಿಕ್ಷಾ !

ಉಡುಪಿ, ಜೂ.19: ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ರಾಜೀವನಗರದ ನಿವಾಸಿ ಬಶೀರ್ ಅಹ್ಮದ್, ಕೋವಿಡ್ -19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳಿಗೆ ಬೇಕಾದ ಎಲ್ಲ ವ್ಯವಸ್ಥೆ ಗಳೊಂದಿಗೆ ತನ್ನ ಆಟೋರಿಕ್ಷಾವನ್ನು ವಿಶಿಷ್ಟ ರೀತಿಯಲ್ಲಿ ಅಣಿಗೊಳಿಸಿದ್ದು, ಈ ಮೂಲಕ ಅವರು ಇಡೀ ಜಿಲ್ಲೆಯಲ್ಲಿಯೇ ಮಾದರಿ ರಿಕ್ಷಾ ಚಾಲಕರೆನಿಸಿಕೊಂಡಿದ್ದಾರೆ.
ಕಳೆದ 25ವರ್ಷಗಳ ಕಾಲ ಗಲ್ಫ್ ದೇಶದಲ್ಲಿ ದುಡಿದು ಒಂದೂವರೆ ವರ್ಷದ ಹಿಂದೆ ಊರಿಗೆ ಬಂದಿರುವ ಬಶೀರ್ ಅಹ್ಮದ್, ರಾಜೀವನಗರ ರಿಕ್ಷಾ ನಿಲ್ದಾಣ ದಲ್ಲಿ ದುಡಿಯುತ್ತಿದ್ದಾರೆ. ಸದ್ಯ ಇವರಲ್ಲಿ ಎರಡು ರಿಕ್ಷಾಗಳಿವೆ. ಒಂದು ರಿಕ್ಷಾ ದಲ್ಲಿ ಕೊರೋನ ಹರಡದಂತೆ ತಡೆಯಲು ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮ ಗಳನ್ನು ಆಳವಡಿಸಿಕೊಂಡಿದ್ದಾರೆ.
ಈ ರಿಕ್ಷಾದಲ್ಲಿ ಕೈತೊಳೆಯಲು ಬೇಕಾದ ನಳ್ಳಿ ನೀರು, ಹ್ಯಾಂಡ್‌ವಾಶ್, ಸ್ಯಾನಿಟೈಝರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದಕ್ಕಾಗಿ ರಿಕ್ಷಾದ ಬಲಭಾಗದಲ್ಲಿ ದೊಡ್ಡ ಪೈಪ್‌ನಿಂದ ಆರು ಲೀಟರ್ ಸಾಮರ್ಥ್ಯದ ಟ್ಯಾಂಕಿಯನ್ನು ರಚಿಸಿಕೊಳ್ಳಲಾಗಿದೆ. ಎಡಭಾಗದಲ್ಲಿ ಚಾಲಕ ಸೀಟಿನ ಕೆಳಗಡೆ ಆ ಟ್ಯಾಂಕಿನಿಂದ ಬರುವ ನೀರನ್ನು ಬಳಸಲು ನಳ್ಳಿಯನ್ನು ಆಳವಡಿಸಲಾಗಿದೆ.
ಮೀಟರಿನ ಕೆಳಗಡೆ ಸ್ಯಾನಿಟೈಝರ್ ಅಥವಾ ಹ್ಯಾಂಡ್‌ವಾಶ್ ಇಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದ ಪ್ರಯಾಣಿಕರು ರಿಕ್ಷಾ ಹತ್ತುವ ಮೊದಲು ನೀರು ಅಥವಾ ಸ್ಯಾನಿಟೈಝರ್‌ನಿಂದ ಕೈ ತೊಳೆದು ಕೊಳ್ಳಬಹುದಾಗಿದೆ. ಅದೇ ರೀತಿ ಪ್ರಯಾಣಿಕರಿಂದ ಚಾಲಕನಿಗೆ ಮತ್ತು ಚಾಲಕನಿಂದ ಪ್ರಯಾಣಿ ಕರಿಗೆ ಯಾವುದೇ ರೀತಿಯ ಸೋಂಕು ಹರಡದಂತೆ ಮಧ್ಯಭಾಗದಲ್ಲಿ ಹತ್ತಿ ಬಟ್ಟೆ ಯಿಂದ ಪರದೆಯನ್ನು ತಯಾರಿಸಿ, ಆಳವಡಿಸಲಾಗಿದೆ. ಇದರಿಂದ ಸೋಂಕು ಹರಡದಂತೆ ತಡೆಯಲಾಗುತ್ತದೆ.
ಒಟ್ಟಾರೆಯಾಗಿ ಬಶೀರ್ ಅಹ್ಮದ್ ಈ ಮೂಲಕ ರಿಕ್ಷಾದಲ್ಲಿ ಪ್ರಯಾಣಿಸುವವರಿಗೆ ಕೊರೋನ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಬಗ್ಗೆ ಸಂದೇಶ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಮಾಡಿರುವ ಈ ಪ್ರಯೋಗದೊಂದಿಗೆ ಪ್ರಯಾಣಿಕರು ಮಾತ್ರವಲ್ಲ, ರಿಕ್ಷಾ ಚಾಲಕರು ಕೂಡ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.
‘ಸ್ಥಳೀಯ ಗ್ಯಾರೇಜ್‌ನಲ್ಲಿ ತನ್ನ ರಿಕ್ಷಾವನ್ನು ಕೊರೋನ ವಿರುದ್ಧ ಹೋರಾಟಕ್ಕೆ ವ್ಯವಸ್ಥೆಗೊಳಿಸಿದ್ದೇನೆ. ಆರು ಲೀ. ಸಾಮರ್ಥ್ಯದ ಟ್ಯಾಂಕ್‌ನಲ್ಲಿ ನೀರು ಖಾಲಿಯದಂತೆ ನಿಲ್ದಾಣದ ಸಮೀಪದಲ್ಲೇ ಇರುವ ನನ್ನ ಮನೆಯ ಬಾವಿಯಿಂದ ನೀರು ತುಂಬಿಸಿಕೊಂಡು ಬರುತ್ತೇನೆ. ಕೊರೋನ ವೈರಸ್‌ನಿಂದ ಎಲ್ಲರು ಸುರಕ್ಷಿತ ವಾಗಿರುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಮುಂದೆ ನನ್ನ ಇನ್ನೊಂದು ರಿಕ್ಷಾಕ್ಕೂ ಇದೇ ರೀತಿ ಮಾಡುವ ಇರಾದೆ ಕೂಡ ಇದೆ’
-ಬಶೀರ್ ಅಹ್ಮದ್, ರಿಕ್ಷಾ ಚಾಲಕರು
'ಕೊರೋನ ರೋಗ ಅಟ್ಟಹಾಸದ ಮಧ್ಯೆ ರಿಕ್ಷಾ ಚಾಲಕ ಬಶೀರ್ ಅಹ್ಮದ್ ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾನು ಕೂಡ ಸಲಹೆಯನ್ನು ನೀಡಿದ್ದೆ. ಪ್ರಯಾಣಿಕರ ಸುರಕ್ಷತೆಗೆ ಇವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದೇ ರೀತಿ ಪ್ರತಿಯೊಬ್ಬ ಚಾಲಕರು ಕೂಡ ತಮ್ಮ ರಿಕ್ಷಾವನ್ನು ಈ ಮಾದರಿಯಲ್ಲಿಯೇ ಮಾಡಿಕೊಂಡರೇ ಉತ್ತಮ'
-ಶಾಂತಾರಾಮ್ ಶೆಟ್ಟಿ, ಅಧ್ಯಕ್ಷರು, ಗ್ರಾಪಂ 80ಬಡಗಬೆಟ್ಟು










