ಸುಸಜ್ಜಿತ ಕೊವಿಡ್-19 ಆಸ್ಪತ್ರೆಯನ್ನಾಗಿಸಲು ಕ್ರಮ: ಡಿಸಿ ಜಗದೀಶ್

ಕುಂದಾಪುರ, ಜೂ.19: ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಅಮ್ಲಜನಕ, ವೆಂಟಿಲೇಟರ್ ಮುಂತಾದ ಸೌಲಭ್ಯಗಳನ್ನು ಅಳವಡಿಸಿ ಸುಸಜ್ಜಿತ ಕೊವಿಡ್ -19 ಆಸ್ಪತ್ರೆಯನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ನೀಡಲಾದ ಗಂಟಲು ದ್ರವ ಮಾದರಿ ಸಂಗ್ರಹ ಸೆಲ್ಕೋ ಕಿಯೋಸ್ಕ್ ಸೌರ ಚಾಲಿತ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೋಂಕು ಕಾಣಿಸಿಕೊಂಡ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಯಿಲೆಯನ್ನು ಕೂಡಲೇ ಗುಣಪಡಿಸಲು ಪ್ರಯತ್ನ ಮಾಡಬಹುದು. ಆದರೆ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ವೈದ್ಯರಿಗೂ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊರಭಾಗದಿಂದ ಬಂದವರು ಸರಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೊವಿಡ್19 ಶಂಕೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಫಿವರ್ ಕ್ಲಿನಿಕ್‌ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಸೆಲ್ಕೋ ಕಂಪೆನಿಯ ವಲಯ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ, ಭಾರತೀಯ ವಿಕಾಸ್ ಟ್ರಸ್ಟ್‌ನ ಸಿಇಓ ಮನೋಹರ್ ಕೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಸರಕಾರಿ ಆಸ್ಪತ್ರೈಯ ಮುಖ್ಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ, ವೆದ್ಯ ಡಾ.ನಾಗೇಶ್ ಉಪಸ್ಥಿತರಿದ್ದರು.





