25 ರೂ.ಗೆ ಒಂದು ಲೀಟರ್ ಪೆಟ್ರೋಲ್!: ಇಂಧನ ಬೆಲೆ ಏರಿಕೆ ಖಂಡಿಸಿ ಮೈಸೂರಿನಲ್ಲಿ ವಿನೂತನ ಪ್ರತಿಭಟನೆ

ಮೈಸೂರು,ಜೂ.19: ಕಚ್ಛಾತೈಲ ಬೆಲೆ ಇಳಿಕೆ ನೋಡಿದರೆ ಇವತ್ತಿನ ಪೆಟ್ರೋಲ್ ಬೆಲೆ 25 ರಿಂದ 30 ರೂ ಇರಬೇಕಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದ ಕುವೆಂಪು ನಗರದಲ್ಲಿರುವ ಚಿಕ್ಕಮ್ಮ ನಿಕೇತನ ಕಲ್ಯಾಣ ಮಂಟಪದ ಬಳಿಯ ಪೆಟ್ರೋಲ್ ಬಂಕ್‍ನಲ್ಲಿ ಶುಕ್ರವಾರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಡೆದ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿ ಒಂದು ಲೀಟರ್ ಗೆ 25 ರೂ.ಗಳಿಗೆ ಪೆಟ್ರೋಲ್ ಹಾಕಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಚ್ಛಾ ತೈಲ ಬೆಳೆ ಇಳಿಕೆ ನೋಡಿದರೆ ಇವತ್ತಿನ ಪೆಟ್ರೋಲ್ ಬೆಲೆ 25 ರಿಂದ 30 ರೂ ಇರಬೇಕಿತ್ತು. ಕೇಂದ್ರ ಸರ್ಕಾರಕ್ಕೆ ಬಡವರ ಕಷ್ಟ ಗೊತ್ತಾಗುತ್ತಿಲ್ಲ. ಕಚ್ಛಾತೈಲದ ಬೆಲೆ ಇಳಿದರೂ ಪೆಟ್ರೋಲ್ ಬೆಲೆ ಇಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯನಾಗಿದ್ದ. ಈಗ ಉಳ್ಳವನೇ ಭೂಮಿಯ ಒಡೆಯನಾಗಿದ್ದಾನೆ. ಸರ್ಕಾರ ಕರಾಳ ಶಾಸನ ತರಲು ಹೊರಟಿದೆ. ಕೊರೋನ ಬಳಸಿಕೊಂಡು ಸುಗ್ರಿವಾಜ್ಞೆ ಮೂಲಕ ಕಾಯ್ದೆ ತರಲು ಹೊರಟಿದೆ. ಈಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು. ಎಪಿಎಂಸಿ ಕಾಯ್ದೆಯನ್ನು ಹೀಗೆ ಮಾಡಿದರು. ತಕ್ಷಣವೇ ವಿಧಾನಸಭೆ ಅಧಿವೇಶನ ಕರೆಯಬೇಕು. ಈ ಎರಡು ಕಾಯ್ದೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು. ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯ ಇದ್ದಿದ್ದರೆ ಅಧಿವೇಶನ ಕರೆಯುತ್ತಿದ್ದರು. ಅವರಲ್ಲಿ ವಿಪಕ್ಷಗಳನ್ನ ಎದುರಿಸುವ ಧೈರ್ಯ ಇಲ್ಲ ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಂಸದ ಆರ್.ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಸದಸ್ಯರಾದ ಹೆಡತಲೆ ಮಂಜುನಾಥ್, ಎನ್.ಭಾಸ್ಕರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಿವಪ್ರಸಾದ್, ಕಾಂಗ್ರೆಸ್ ಮುಖಂಡರಾದ ಕೆ.ಮರೀಗೌಡ, ಶಿವಣ್ಣ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಸಏರಿದಂತೆ ಹಲವರು ಉಪಸ್ಥಿತರಿದ್ದರು.







