ಭೂಮಿಗಾಗಿ ಭಾರತದ ಜೊತೆ ಚೀನಾ ಸಂಘರ್ಷ: ಅಮೆರಿಕ ಸೆನೆಟರ್

ವಾಶಿಂಗ್ಟನ್, ಜೂ. 19: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯು ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಭಾರತದ ಸೈನಿಕರ ಜೊತೆ ಭೀಕರ ಸಂಘರ್ಷಕ್ಕೆ ಇಳಿದಿರುವಂತೆ ಕಂಡುಬರುತ್ತಿದೆ ಎಂದು ಅಮೆರಿಕದ ಸೆನೆಟ್ ನಾಯಕ ಮಿಚ್ ಮೆಕಾನೆಲ್ ಗುರುವಾರ ಹೇಳಿದ್ದಾರೆ.
ಸೆನೆಟ್‌ನಲ್ಲಿ ಮಹತ್ವದ ವಿದೇಶ ನೀತಿ ಭಾಷಣ ಮಾಡಿದ ವೇಳೆ ಸೆನೆಟರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರ ದೇಶಗಳ ಹಿತಾಸಕ್ತಿಗೆ ಅತೆ ಹೆಚ್ಚು ಬೆದರಿಕೆಯಾಗಿರುವ ದೇಶಗಳ ಪಟ್ಟಿಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
‘‘ಈ ಎರಡು ಪರಮಾಣು ಶಕ್ತ ದೇಶಗಳ ನಡುವಿನ ಹಿಂಸಾತ್ಮಕ ಘರ್ಷಣೆಯನ್ನು ಜಗತ್ತು ಅತ್ಯಂತ ಕಳವಳದಿಂದ ಗಮನಿಸುತ್ತಿದೆ ಎನ್ನುವುದನ್ನು ಹೇಳುವ ಅಗತ್ಯವಿಲ್ಲ. ನಾವು ಉದ್ವಿಗ್ನತೆ ನಿವಾರಣೆಗೆ ಪ್ರೋತ್ಸಾಹ ನೀಡುತ್ತೇವೆ ಹಾಗೂ ಶಾಂತಿಗಾಗಿ ಆಶಿಸುತ್ತೇವೆ’’ ಎಂದು ಮೆಕಾನೆಲ್ ನುಡಿದರು.
‘‘ಆದರೆ, ತನ್ನದೇ ಗಡಿಯೊಳಗಿನ ಜನರ ಮೇಲೂ ಚೀನಾ ಇದೇ ರೀತಿಯ ಕ್ರೌರ್ಯವನ್ನು ಮೆರೆಯುತ್ತಿದೆ ಹಾಗೂ ಅಂತರ್‌ರಾಷ್ಟ್ರೀಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ ಹಾಗೂ ಜಗತ್ತಿನ ನಕಾಶೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾವು ಮರೆಯಬಾರದು’’ ಎಂದು ಅವರು ಹೇಳಿದರು.







