ಸಿದ್ಧಗಂಗಾ ಮಠದ ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಪಾಸಿಟಿವ್
![ಸಿದ್ಧಗಂಗಾ ಮಠದ ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಪಾಸಿಟಿವ್ ಸಿದ್ಧಗಂಗಾ ಮಠದ ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಪಾಸಿಟಿವ್](https://www.varthabharati.in/sites/default/files/images/articles/2020/06/19/247975-1592586527.jpg)
ತುಮಕೂರು, ಜೂ.19: ಸಿದ್ದಗಂಗಾ ಮಠದ ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಸೋಂಕು ತಗುಲಿದ್ದು, ಆತನ ಜತೆ ಓದುತ್ತಿರುವವರು ಮತ್ತು ಶಿಕ್ಷಕ ವೃಂದದಲ್ಲಿ ಆತಂಕ ಸೃಷ್ಟಿಸಿದೆ.
ಆಂಧ್ರಪ್ರದೇಶದ ಕರ್ನೂಲ್ ಮೂಲದ ಎಸೆಸೆಲ್ಸಿ ವಿದ್ಯಾರ್ಥಿ ರಾಯಚೂರು ಮೂಲಕ ಜೂ. 15ರಂದು ಮಠಕ್ಕೆ ಬಂದಿದ್ದ ಎನ್ನಲಾಗಿದ್ದು, ಆತನಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ನಂತರ ಕರ್ನೂಲ್ ಜಿಲ್ಲಾಡಳಿತ ವಿದ್ಯಾರ್ಥಿಗೆ ಕೊರೋನ ಸೋಂಕು ತಗಲಿರುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಡಳಿತದ ಅಧಿಕಾರಿಗಳು ಮಠಕ್ಕೆ ದೌಡಾಯಿಸಿದರು. ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮತ್ತೊಮ್ಮೆ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಯಿತು.
ಆತನೊಂದಿಗೆ ಕೊಠಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳನ್ನು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕೊರೋನ ಸೋಂಕು ತಗಲಿರುವ ವಿದ್ಯಾರ್ಥಿ 4 ದಿನಗಳಿಂದ ಇತರ ಎಸೆಸೆಲ್ಸಿ ವಿದ್ಯಾರ್ಥಿಗಳ ಜತೆ ಬೆರೆತಿದ್ದಾನೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಯು ಶಿವಕುಮಾರ ಸ್ವಾಮೀಜಿಯ ಶತಮಾನೋತ್ಸವ ಭವನದಲ್ಲಿ ಎಲ್ಲ ವಿದ್ಯಾರ್ಥಿಗಳ ಜೊತೆಗೆ ಒಟ್ಟಿಗೆ ಕುಳಿತು ಊಟ ಮಾಡಿದ್ದಾನೆ ಎನ್ನಲಾಗಿದ್ದು, ಶೌಚ, ಸ್ನಾನ ಗೃಹ ಕೂಡ ಬಳಸಿದ್ದಾನೆ ಎಂದು ವರದಿಯಾಗಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇಲ್ಲಿ ಒಂದು ಕಡೆ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.