ಬೀಡಿ ಕಾರ್ಮಿಕರಿಗೆ ಪರಿಹಾರ ನೀಡಲು ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಮಂಗಳೂರು, ಜೂ.19: ರಾಜ್ಯ ಸರಕಾರವು ಬೀಡಿ ಕಾರ್ಮಿಕರಿಗೆ ಕೋವಿಡ್-19 ಪರಿಹಾರ ಧನ 10,000 ಘೋಷಿಸುವಂತೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್‌ನ ನೇತೃತ್ವದಲ್ಲಿ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಬೀಡಿ ಕಾರ್ಮಿಕರ ನೈಜ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರಕಾರ ಬೀಡಿ ಕಾರ್ಮಿಕರ ವಿಚಾರದಲ್ಲಿ ಕಾಳಜಿ ವಹಿಸದಿರುವುದು ದುರಂತ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ತಮ್ಮ ಮೌನ ಮುರಿದು ಬೀಡಿ ರ್ಕಾುಕರ ಅನುಭವಿಸುತ್ತಿರುವ ಬವಣೆಗಳ ಕುರಿತು ಸರಕಾರದ ಮೇಲೆ ಒತ್ತಡ ತಂದು ಬೀಡಿ ಕಾರ್ಮಿಕರಿಗೆ ಪರಿಹಾರ ದೊರಕುವಂತೆ ಪ್ರಯತ್ನಿಸಬೇಕು ಎಂದು ಒತ್ತಾಯಿಸುವ ಮನವಿಯನ್ನು ಜಿಲ್ಲಾಧಿಕಾರಿಯ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಅರ್ಪಿಸಲಾಯಿತು.
ಲಾಕ್‌ಡೌನ್ ಸಂದರ್ಭ ಬಹುತೇಕ ಬೀಡಿ ಕಾರ್ಮಿಕರ ಕುಟುಂಬ ಒಂದೆಡೆ ಬೀಡಿ ಕೆಲಸವಿಲ್ಲದೆ ಇನ್ನೊಂದೆಡೆ ಕೂಲಿ ಕೆಲಸವೂ ಇಲ್ಲದೆ ಬಹಳ ಕಷ್ಟದಿಂದ ಜೀವನ ಸಾಗಿಸಿದೆ. ಈ ಸಂದರ್ಭ ಕಳೆದ 201 ರಿಂದ ಬಾಕಿ ಇರಿಸಿದ ತುಟ್ಟಿಭತ್ತೆ 12.75 ರೂ.ವನ್ನು 2018ರ ಎಪ್ರಿಲ್‌ನಿಂದ ಕೊಡಬೇಕಾದ ಕನಿಷ್ಟ ವೇತನ 210 ರೂ. ಅಲ್ಲದೆ ಈ ವರ್ಷ ಸರಕಾದ ಗಜೆಟೆಡ್ ನೋಟಿಫಿಕೇಶನ್ ಮುಖೇನ ಪ್ರಕಟಿಸಿದ ತುಟ್ಟಿಭತ್ತೆ 13.92 ರೂ.ವನ್ನು ಮಾಲಕರು ಕಾರ್ಮಿಕರಿಗೆ ಪಾವತಿಸಲು ಕಾಲಹರಣ ಮಾಡಿ ವಂಚಿಸಲು ಹವಣಿಸುತ್ತಿದ್ದಾರೆ ಎಂದು ಫೆಡರೇಶನ್ ಆರೋಪಿಸಿದೆ.
ಈ ಸಂದರ್ಭ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್‌ನ ಅಧ್ಯಕ್ಷೆ ಸುಲೋಚನಾ ಕವತ್ತಾರು, ಕೋಶಾಧಿಕಾರಿ ಎಂ.ಕರುಣಾಕರ್, ಬಂಟ್ವಾಳ ತಾಲೂಕು ಬೀಡಿ ಲೇರ್ ಯೂನಿಯನ್‌ನ ಕಾರ್ಯದರ್ಶಿ ಬಿ.ಶೇಖರ್, ಅಧ್ಯಕ್ಷ ಬಾಬು ಭಂಡಾರಿ, ಸಹ ಕಾರ್ಯದರ್ಶಿಗಳಾದ ಹರ್ಷಿತ್ ಮತ್ತು ಸರೋಜಿನಿ, ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್‌ನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಭಾರತಿ ಶಂಭೂರು, ಸುಧಾಕರ್ ಕೆ., ಕೃಷ್ಣಪ್ಪ ವಾಮಂಜೂರು ಉಪಸ್ಥಿತರಿದ್ದರು.







