ಚಿಕ್ಕಮಗಳೂರು: ಜೈಲಿನಲ್ಲಿದ್ದ ಕೈದಿ ಸೇರಿ ಇಬ್ಬರಿಗೆ ಕೊರೋನ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜೂ.19: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಗುರುವಾರ ಅಜ್ಜಂಪುರ ತಾಲೂಕಿನ ವೃದ್ಧೆಯೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಇಬ್ಬರಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಇಬ್ಬರು ಸೋಂಕಿತರ ಪೈಕಿ ನಗರದ ಜೈಲಿನಲ್ಲಿದ್ದ ಕೈದಿಯೊಬ್ಬನಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಈ ಪ್ರಕರಣದಿಂದಾಗಿ ಇಡೀ ಜೈಲನ್ನೇ ಸೀಲ್ಡೌನ್ ಮಾಡುವ ಸಂದರ್ಭ ಎದುರಾಗಿದೆ.
ಗುರುವಾರ ಜಿಲ್ಲೆಯಲ್ಲಿ ಮೂವರಲ್ಲಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದು, ಮೂವರ ಪೈಕಿ 72 ವರ್ಷದ ವೃದ್ಧೆ ಗುರುವಾರ ಮಧ್ಯಾಹ್ನದ ವೇಳೆಯೇ ಮೃತಪಟ್ಟಿದ್ದರು. ಉಳಿದ ಇಬ್ಬರ ಪೈಕಿ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದ ವೃದ್ಧೆಯ ಮಗನಾಗಿದ್ದು, ಮತ್ತೋರ್ವ ವ್ಯಕ್ತಿ ಕೊಪ್ಪ ತಾಲೂಕಿನವರಾಗಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ಶುಕ್ರವಾರ ಸಂಜೆ ನಗರದ ಜೈಲಿನಲ್ಲಿ ಕೈದಿಯಾಗಿದ್ದ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನ ನಿವಾಸಿಯಲ್ಲಿ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ. ಈ ಕೈದಿ ಇತ್ತೀಚೆಗೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು, ಜೈಲಿಗೆ ಬರುವುದಕ್ಕೂ ಮುನ್ನ ಹೊರ ಜಿಲ್ಲೆಗೆ ಭೇಟಿ ನೀಡಿದ್ದ ಎಂದು ತಿಳಿದು ಬಂದಿದ್ದು, ಜೈಲಿನಲ್ಲಿದ್ದ ವೇಳೆ ಈತನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಈತನನ್ನು ಕ್ವಾರಂಟೈನ್ಗೆ ಒಳಪಡಿಸಿ, ರಕ್ತ ಹಾಗೂ ಗಂಟಲದ್ರವದ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಸಂಜೆ ಪ್ರಯೋಗಾಳಯದ ವರದಿ ಜಿಲ್ಲಾಡಳಿತ ಕೈಸೇರಿದ್ದು, ಈ ಕೈದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಕೈದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿರುವುದರಿಂದ ನಗರದ ಹೊರವಲಯದಲ್ಲಿರುವ ಜೈಲಿನ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಈ ಕೈದಿಯಿಂದಾಗಿ ಜೈಲಿನ ಅಧಿಕಾರಿಗಳು ಹಾಗೂ ಕೈದಿಗಳು ಆತಂಕದಲ್ಲಿದ್ದಾರೆ. ಜಿಲ್ಲಾಡಳಿತಕ್ಕೆ ಸದ್ಯ ಇಡೀ ಜೈಲನ್ನೇ ಸೀಲ್ಡೌನ್ ಮಾಡುವ ಪರಿಸ್ಥಿತಿ ಎದುರಾಗಿದ್ದು, ಈ ಸಂಬಂಧ ಹೆಚ್ಚು ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇನ್ನು ಜಿಲ್ಲೆಯಲ್ಲಿ ಪತ್ತೆಯಾಗಿರುವ ಮತ್ತೊಂದು ಪ್ರಕರಣ ತರೀಕೆರೆ ತಾಲೂಕಿನದ್ದಾಗಿದ್ದು, ಈ ವ್ಯಕ್ತಿ ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿ ಬಂದಿದ್ದರೆಂದು ತಿಳಿದು ಬಂದಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಇಬ್ಬರು ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೊರೋನ ನಿಗಾ ಘಟಕಕ್ಕೆ ಚಿಕಿತ್ಸೆಗೆ ದಾಖಲಿಸಿದ್ದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದವರ ಪತ್ತೆಗೆ ಮುಂದಾಗಿದೆ. ಶುಕ್ರವಾರ ಪತ್ತೆಯಾದ ಎರಡು ಪ್ರಕರಣಗಳೂ ಸೇರಿದಂತೆ ಜಿಲ್ಲೆಯಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 8ಕ್ಕೇರಿದೆ.







