ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹ: ಚಿಕ್ಕಮಗಳೂರು ಡಿಸಿ ಮೂಲಕ ಸರಕಾರಕ್ಕೆ ಮನವಿ

ಚಿಕ್ಕಮಗಳೂರು, ಜೂ.19: ಕೊರೋನ ಭೀತಿಯಿಂದಾಗಿ ರಾಜ್ಯ ಸರಕಾರ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಜಾರಿ ಮಾಡಿದ್ದು, ಈ ಅವಧಿಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಖಾಸಗಿ ಶಾಲೆಗಳ ಸಾವಿರಾರು ಶಿಕ್ಷಕರು ಕೆಲಸದೊಂದಿಗೆ ವೇತನವೂ ಇಲ್ಲದೇ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಸರಕಾರ ಆಟೊ, ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ವಿವಿಧ ವೃತ್ತಿಯವರಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಂತೆ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರದ ಪ್ಯಾಕೇಜ್ ನೀಡಬೇಕೆಂದು ಜಿಲ್ಲಾ ಖಾಸಗಿ ಶಾಲೆಗಳ ಶಿಕ್ಷಕರು ಆಗ್ರಹಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಶಿಕ್ಷಕರು, ಸರಕಾರ ಜಾರಿ ಮಾಡಿದ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ನೂರಾರು ಖಾಸಗಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಶಾಲೆಗಳನ್ನೂ ಇನ್ನೂ ಪುನರಾರಂಭ ಮಾಡಿಲ್ಲ. ಪರಿಣಾಮ ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ಖಾಸಗಿ ಶಾಲಾ ಶಿಕ್ಷಕರು ವೇತನವಿಲ್ಲದೇ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ. ಕೆಲಸವಿಲ್ಲದ ಜಿಲ್ಲೆಯ ಸಾವಿರಾರು ಶಿಕ್ಷಕರು ಉನ್ನತ ವ್ಯಾಸಂಗ ಮಾಡಿಕೊಂಡು ಕೂಲಿ ಕೆಲಸ ಮಾಡುವಂತಾಗಿದ್ದು, ಮಾನಸಿಕವಾಗಿ ನರಳುವಂತಾಗಿದೆ. ಧೀರ್ಘ ಅವಧಿಗೆ ಕೆಲಸವಿಲ್ಲದಂತಾಗಿರುವುದರಿಂದ ಶಿಕ್ಷಕರು ಆತ್ಮಹತ್ಯೆ ದಾರಿ ತುಳಿಯುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಕಳೆದ ಮೂರು ತಿಂಗಳಿನಿಂದ ಶಾಲೆಗಳನ್ನು ಮುಚ್ಚಿರುವುದರಿಂದ ಈ ಅವಧಿಯಲ್ಲಿ ಶಾಲಾ ಆಡಳಿತ ಮಂಡಳಿಯೂ ವೇತನ ನೀಡಿಲ್ಲ. ಸರಕಾರ ಬಿಡಿಗಾಸಿನ ನೆರವನ್ನೂ ನೀಡಿಲ್ಲ ಎಂದು ಆರೋಪಿಸಿದ ಶಿಕ್ಷಕರು, ರಾಜ್ಯ ಸರಕಾರ ಕೂಡಲೇ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲೆಯಲ್ಲಿನ ವಿವಿಧ ಖಾಸಗಿ ಶಾಲೆಗಳ ಶಿಕ್ಷಕರಾದ ಸೌಮ್ಯಾ, ಕವಿತಾ, ರಮ್ಯಾ, ದಿವ್ಯಾ, ಲೋಲಾಖ್ಷಿ, ಅನಿತಾ ಸೇರಿದಂತೆ ಸಾಮಾಜಿಕ ಕಾರ್ಯಕರ್ತ ಕೂದುವಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.







