ಪಡಿತರ, ಆಹಾರ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ

ಚಿಕ್ಕಮಗಳೂರು, ಜೂ.19: ಹಸಿವಿನಿಂದ ಯಾರೊಬ್ಬರೂ ಬಳಲಬಾರದೆಂಬ ಉದ್ದೇಶದಿಂದ ರಾಷ್ಟ್ರೀಯ ಆಹಾರ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ ಆಹಾರ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆಯೋಗ ವತಿಯಿಂದ ರಾಜ್ಯದ 27 ಜಿಲ್ಲೆಗಳಲ್ಲಿ ಪ್ರವಾಸಕೊಳ್ಳಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಕೆಲವು ನ್ಯೂನತೆಗಳನ್ನು ಹೊರತು ಪಡಿಸಿದರೆ ಪಡಿತರ ವಿತರಣೆ, ಅಂಗನವಾಡಿ, ಬಿಸಿಯೂಟ, ಎನ್‍ಆರ್‍ಸಿ ವ್ಯವಸ್ಥೆ ತೃಪ್ತಿಕರವಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜೂ.16ರಿಂದ 19ರವರೆಗೆ ಪ್ರವಾಸ ಕೈಗೊಂಡುವ ವಿವಿಧ ತಾಲೂಕುಗಳಿಗೆ ಭೇಟಿ ನೀಡಿದ್ದ ಅವರು, ಶುಕ್ರವಾರ ಜಿಲ್ಲಾ ಪಂಚಾಯತ್ ಕಚೇರಿಯ ಮಿನಿ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆಯಡಿಯಲ್ಲಿ ದೇಶದ ಪ್ರತೀ ಪ್ರಜೆಗೂ ಆಹಾರ ಒದಗಿಸುವುದು ಸರಕಾರಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ, ಕೇಂದ್ರ ಸರಕಾರಗಳು ನ್ಯಾಯಬೆಲೆ ಅಂಗಡಿಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಸ್ಟೆಲ್ ಮತ್ತಿತರ ಯೋಜನೆಗಳ ಮೂಲಕ ದೇಶದ ಪ್ರತೀ ಪ್ರಜೆಗೂ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕೆಲವನ್ನು ರಾಜ್ಯ ಆಹಾರ ಆಯೋಗ ಮಾಡುತ್ತಿದ್ದು, ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗಿದೆ. ಇದುವರೆಗೂ ರಾಜ್ಯದಲ್ಲಿ 26 ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಾಗಿದ್ದು, ಚಿಕ್ಕಮಗಳೂರು 27ನೇ ಜಿಲ್ಲೆಯಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ 8 ತಾಲೂಕುಗಳಲ್ಲಿ ಪ್ರವಾಸಕೈಗೊಂಡು ಈ ವ್ಯವಸ್ಥೆಯ ಕಾರ್ಯವೈಖರಿಯನ್ನು ಪರಿಶೀಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ 9 ನ್ಯಾಯಬೆಲೆ ಅಂಗಡಿ, 7 ಅಂಗನವಾಡಿ ಕೇಂದ್ರಗಳು ಹಾಗೂ 5 ಮಧ್ಯಾಹ್ನದ ಬಿಸಿಯೂಟ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವಂಚನೆ ಮಾಡುತ್ತಿರುವುದು, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ರಜಾ ದಿನಗಳ ಪೌಷ್ಠಿಕ ಆಹಾರವನ್ನು ಪೂರೈಕೆ ಮಾಡದಿರುವುದು, ದಾಖಲೆಗಳನ್ನು ಸಮರ್ಪಕವಾಗಿ ಇಡದಿರುವುದು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಆಹಾರದಲ್ಲಿ ಗುಣಮಟ್ಟ, ಪ್ರಮಾಣ ಕಾಯ್ದುಕೊಳ್ಳದಿರುವುದು ಹಾಗೂ ಪಡಿತರ ದಾಸ್ತಾನು ಗೋಡನ್‍ಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಆಯೋಗದ ಸದಸ್ಯ ಶಿವಶಂಕರ್ ಮಾತನಾಡಿ, ಆಯೋಗ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಗ್ರಹಿಸಿದ ಮಾಹಿತಿ, ಲೋಷಗಳ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಅಲ್ಲದೇ ಅಧಿಕಾರಿಗಳ ಸಭೆ ನಡೆಸಿ ಸುಧಾರಣೆಗೂ ಸೂಚನೆ ನೀಡಲಿದೆ ಎಂದ ಅವರು, ಜಿಲ್ಲೆಯ 8 ತಾಲೂಕುಗಳಲ್ಲಿ ಪ್ರವಾಸ ಕೈಗೊಂಡ ವೇಳೆ 9 ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮೂರು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದ ಸ್ಕೇಲ್‍ನಲ್ಲಿ ಸ್ಟಾಂಪಿಂಗ್ ಸೀಲ್ ತೆಗೆದು ಪಡಿತರ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರಗಳ ಪೈಕಿ 7 ಕೇಂದ್ರಗಳಿಗೆ ಭೇಟಿ ನೀಡಿದ್ದ ವೇಳೆ ಮಕ್ಕಳ ದಾಖಲಾತಿ ಪುಸ್ತಕ, ಆಹಾರ ಸಾಮಗ್ರಿಗಳ ವಿತರಣೆಯ ದಾಖಲಾತಿಯನ್ನು ನಿರ್ವಹಣೆ ಮಾಡದಿರುವುದು, ರಜೆಯ ದಿನಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡದಿರುವುದು ಬೆಳಕಿಗೆ ಬಂದಿದ್ದು, ಮಧ್ಯಾಹ್ನದ ಬಿಸಿಯೂಟ ನೀಡುವ ಶಾಲೆಗಳ ಪೈಕಿ 5 ಶಾಲೆಗಳಿಗೆ ಭೇಟಿ ನೀಡಿದ್ದು, ಸರಕಾರ ನಿಗದಿ ಮಾಡಿರುವ ಆಹಾರದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾಗೂ ಗುಣಮಟ್ಟದ ಆಹಾರ ನೀಡದೇ ಆಹಾರ ಸಾಮಗ್ರಿ ಅಸಮರ್ಪಕ ಪೂರೈಕೆಯ ನೆಪವೊಡ್ಡಿ ಹೊಂದಾಣಿಕೆ ಮಾಡುತ್ತಾ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ದಾಖಲೆಗಳಿಂದ ತಿಳಿದು ಬಂದಿದೆ ಎಂದರು.
ಜಿಲ್ಲೆಗೆ ಪಡಿತರ ಪೂರೈಕೆ ವೇಳೆ ಪೂರೈಕೆದಾರರು ಗಣಕೀಕೃತ ರಶೀದಿ ನೀಡದಿರುವುದು ಬೆಳಕಿಗೆ ಬಂದಿದ್ದು, ಪಡಿತರ ದಾಸ್ತಾನು ಗೋಡನ್‍ಗಳ ಪೈಕಿ ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಗೋಡನ್‍ಗಳಲ್ಲಿ ತೂಕದ ಯಂತ್ರಗಳಲ್ಲಿ ತೂಕ ವೆತ್ಯಾಸ ಆಗುತ್ತಿರುವುದ ಕಂಡು ಬಂದಿದೆ. ಕೆಲ ಗೋಡನ್‍ಗಳಲ್ಲಿ ಪಡಿತರ ದಾಸ್ತಾನನ್ನು ಅವೈಜ್ಞಾನಿಕವಾಗಿಯೂ, ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿದೆ. ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ 27 ಹಾಸ್ಟೆಲ್ ಕಟ್ಟಡಗಳಿದ್ದು, ಈ ಪೈಕಿ 20 ಹಾಸ್ಟೆಲ್ ಕಟ್ಟಡಗಳನ್ನು ಕೊರೋನ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಉಳಿದ 7 ಹಾಸ್ಟೆಲ್ ಕಟ್ಟಡಗಳು ಖಾಲಿ ಇದ್ದು, ಮಕ್ಕಳಿಲ್ಲದಿರುವುದರಿಂದ ಕಟ್ಟಡಗಳನ್ನು ಪಾಳು ಬಿಡದೆ ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದರು.
ಆಯೋಗದ ಮತ್ತೋರ್ವ ಸದಸ್ಯ ಮುಹಮ್ಮದ್ ಆಲಿ ಮಾತನಾಡಿ, ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಅಪೌಷ್ಠಿಕ ಮಕ್ಕಳ ಪುನಃಶ್ಚೇತನ ಕೇಂದ್ರ( ಎನ್‍ಆರ್‍ಸಿ)ಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕಮಗಳೂರು ನಗರದಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಈ ಎನ್‍ಆರ್‍ಸಿ ಕೇಂದ್ರ ಇತ್ತು. ಆದರೆ ಇದನ್ನು ಸದ್ಯ ಕೋವಿಡ್ ಚಿಕಿತ್ಸಾ ಘಟಕವನ್ನಾಗಿ ಪರಿವರ್ತಿಸಲಾಗಿದ್ದು, ಬೇರೆ ಕಟ್ಟಡಕ್ಕೆ ಇದನ್ನು ಸ್ಥಳಾಂತರ ಮಾಡಲಾಗಿದೆ. ಈ ಕಟ್ಟಡದಲ್ಲಿ 6 ಬೆಡ್‍ಗಳಿದ್ದು, ಅಪೌಷ್ಠಿಕತೆ ಇರುವ 6 ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಕಟ್ಟಡದಲ್ಲಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದನ್ನು ಡಿಸಿ ಗಮನಕ್ಕೆ ತರಲಾಗಿದೆ ಎಂದರು.
ಸುದ್ದಿಗೋಷ್ಠಿ ಜಿಲ್ಲಾ ಪಂಚಾಯತ್ ಸಿಇಒ ಎಸ್.ಪೂವಿತಾ ಉಪಸ್ಥಿತರಿದ್ದರು.







