ಮೈಸೂರು: ಅತಿಥಿ ಉಪನ್ಯಾಸಕರಿಗೆ ವೇತನ ನೀಡುವಂತೆ ಒತ್ತಾಯಿಸಿ ಧರಣಿ

ಮೈಸೂರು,ಜೂ.19: ಲಾಕ್ ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ 12 ತಿಂಗಳು ವೇತನ ನೀಡಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೈಸೂರಿನಲ್ಲಿಯೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಲಾರ್ ಡೌನ್ ಅವಧಿಯಲ್ಲಿ ಕರ್ತವ್ಯದ ಅವಧಿಯೆಂದು ಪರಿಗಣಿಸಿ ಅತಿಥಿ ಉಪನ್ಯಾಸಕರಿಗೆ 12 ತಿಂಗಳು ವೇತನ ನೀಡಬೇಕು, ಸೇವೆಯಲ್ಲಿ ವಿಲೀನಗೊಳಿಸಿ ತಕ್ಷಣ ಉದ್ಯೋಗ ಭದ್ರತೆ ಘೋಷಿಸಿ ನಿಯಮಾನುಸಾರ ವೈದ್ಯಕೀಯ ಸೌಲಭ್ಯ ಮತ್ತು ಭಿಷ್ಯ ನಿಧಿ ನೀಡಬೇಕು, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಸರಣಿ ಆತ್ಮಹತ್ಯೆಯ ಬಗ್ಗೆ ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಥವಾ ಸದನ ಸಮತಿ ರಚಿಸಬೇಕು ಎಂದು ಒತ್ತಾಯಿಸಿದರು.
ಇದುವರೆಗೆ ಮೃತ ಪಟ್ಟ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು. 2020-21ನೇ ಶೈಕ್ಷಣಿಕ ಸಾಲಿನಲ್ಲಿ ಅನಗತ್ಯವಾಗಿ ಸಹಾಯಕ ಪ್ರಾಧ್ಯಾಪಕರನ್ನು ಮೂಲ ಕಾಲೇಜಿನಲ್ಲಿ ಕಾರ್ಯಭಾರವಿದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಾರ್ಯಭರವಿಲ್ಲದ ಕಾಲೇಜುಗಳಿಗೆ ನಿಯೋಜನೆಗೊಂಡವರ ನಿಯೋಜನೆಯನ್ನು ಕೂಡಲೇ ರದ್ದುಪಡಿಸಿ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಜಿಲ್ಲಾಧ್ಯಕ್ಷ ಮಹಾದೇವಯ್ಯ, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಸಂಘಟನಾ ಕಾರ್ಯದರ್ಶಿ ಡಾ.ಬಾಬುರಾಜ್, ಮಹೇಶ್, ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.







