ವಲಸಿಗ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಗಾಗಿ ಹೊಸ ಯೋಜನೆಗೆ ಪ್ರಧಾನಿ ಚಾಲನೆ
ಹೊಸದಿಲ್ಲಿ,ಜೂ.20: ಕೊರೋನ ವೈರಸ್ ಪಿಡುಗು ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ಮನೆಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಗ್ರಾಮೀಣ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು 50,000 ಕೋ.ರೂ.ವೆಚ್ಚದ ‘ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನ ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.
ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಗಳನ್ನು ಅನುಭವಿಸಿರುವ ವಲಸೆ ಕಾರ್ಮಿಕರು ಈ ಯೋಜನೆಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದ ಅವರು,ಈವರೆಗೆ ನಗರಗಳ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದ್ದ ಕಾರ್ಮಿಕರಿಗೆ ಈಗ ಅವರ ಹುಟ್ಟೂರು ಮತ್ತು ಗ್ರಾಮಗಳ ಸಮೀಪವೇ ಉದ್ಯೋಗಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
‘ಇಂದು ಐತಿಹಾಸಿಕ ದಿನವಾಗಿದೆ. ಬಡವರ ಕಲ್ಯಾಣ ಮತ್ತು ಜೀವನೋಪಾಯಕ್ಕಾಗಿ ಯೋಜನೆಯನ್ನು ಆರಂಭಿಸಲಾಗಿದೆ. ನನ್ನ ಕಾರ್ಮಿಕ ಮಿತ್ರರೇ, ನಿಮ್ಮ ಭಾವನೆಗಳು ಮತ್ತು ಅಗತ್ಯಗಳನ್ನು ದೇಶವು ಅರ್ಥ ಮಾಡಿಕೊಂಡಿದೆ. ಬಿಹಾರದಿಂದ ಆರಂಭಗೊಳ್ಳುವ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನವು ನಿಮ್ಮ ಅಗತ್ಯಗಳನ್ನು ಪೂರೈಸಲು ಪ್ರಮುಖ ಸಾಧನವಾಗಿದೆ. ಈವರೆಗೆ ನಗರಗಳ ಅಭಿವೃದ್ಧಿಗಾಗಿ ನಿಮ್ಮ ಶ್ರಮ, ಕೌಶಲವನ್ನು ಧಾರೆಯೆರೆದಿದ್ದೀರಿ. ಈಗ ನೀವು ನಿಮ್ಮ ಗ್ರಾಮಗಳು ಮತ್ತು ಸುತ್ತುಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ನೆರವಾಗಲಿದ್ದೀರಿ’ ಎಂದು ಮೋದಿ ಹೇಳಿದರು.
ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನವು 125 ದಿನಗಳ ಕಾಲ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳ 116 ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರಲಿದೆ. ಪ್ರತಿ ಜಿಲ್ಲೆಯಲ್ಲಿಯೂ ಕೊರೋನ ವೈರಸ್ ಲಾಕ್ಡೌನ್ನಿಂದಾಗಿ ಉದ್ಯೋಗವನ್ನು ಕಳೆದುಕೊಂಡು ತಮ್ಮ ಹುಟ್ಟೂರುಗಳಿಗೆ ವಾಪಸಾಗಿರುವ ಸುಮಾರು 25,000 ವಲಸೆ ಕಾರ್ಮಿಕರಿದ್ದಾರೆ.
ಗ್ರಾಮೀಣ ಭಾರತದಲ್ಲಿ ಉದ್ಯೋಗಗಳ ಸೃಷ್ಟಿಗಾಗಿ ಸಾರ್ವಜನಿಕ ಕಾಮಗಾರಿಗಳ ಮೂಲಕ 50,000 ಕೋ.ರೂ.ಗಳ ವೆಚ್ಚದಲ್ಲಿ ಮೂಲಸೌಕರ್ಯಗಳ ನಿರ್ಮಾಣವು ಯೋಜನೆಯ ಉದ್ದೇಶವಾಗಿದೆ.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮೋದಿ ಅವರು ದೇಶದ ವಿವಿಧ ಭಾಗಗಳ ವಲಸೆ ಕಾರ್ಮಿಕರೊಂದಿಗೆ ಮಾತನಾಡಿ ಲಾಕ್ಡೌನ್ ಅವಧಿಯಲ್ಲಿ ಅವರು ಎದುರಿಸಿದ್ದ ಕಷ್ಟಗಳ ಬಗ್ಗೆ ವಿಚಾರಿಸಿದರು.