ಉಡುಪಿ: ಜಿಲ್ಲೆಯ 10 ಕಡೆಗಳಲ್ಲಿ ಜ್ವರ ಪರೀಕ್ಷಾ ಕೇಂದ್ರ ಆರಂಭ
ಉಡುಪಿ, ಜೂ.20: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸುವ ಪ್ರಯತ್ನವಾಗಿ ಒಟ್ಟು ಹತ್ತು ಕಡೆಗಳಲ್ಲಿ ಜ್ವರ ಪರೀಕ್ಷಾ ಕೇಂದ್ರ (ಫೀವರ್ ಕ್ಲಿನಿಕ್-ಜ್ವರ ದವಾಖಾನೆ)ಗಳನ್ನು ತೆರೆಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆ ಸುಮಾರು 13 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಸ್ಥಳೀಯರಿಗೆ ಕೋವಿಡ್ ಹರಡುವುದನ್ನು ತಡೆಯುವುದು ಜಿಲ್ಲಾಡಳಿತದ ಪ್ರಾಶಸ್ತ್ಯವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಆಗಮಿಸುವ ಅನೇಕರಲ್ಲಿ ಕೋವಿಡ್ ಸೋಂಕು ಕಂಡುಬರುತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋವಿಡ್-19 ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ಪರೀಕ್ಷಿಸಿ ಸೋಂಕು ಇದ್ದಲ್ಲಿ ತಕ್ಷಣವೇ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಅತೀ ಮುಖ್ಯವಾಗಿದೆ. ಇದಕ್ಕಾಗಿ ಈಗಾಗಲೇ ಕೋವಿಡ್ ಕಣ್ಗಾವಲು (ಸರ್ವೇಲನ್ಸ್)ನ್ನು ಚುರುಕುಗೊಳಿಸಿದ್ದು, ಯಾವುದೇ ಸಂಶಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಆರೋಗ್ಯವಂತರಿಗೆ ಸೋಂಕು ತಗಲ ದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದರು.
ಹೀಗೆ ಗುರುತಿಸಿದ ಕೋವಿಡ್ ಲಕ್ಷಣವಿರುವ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷಿಸಲು ಜಿಲ್ಲೆಯಲ್ಲಿ ಈಗಾಗಲೇ 10 ಜ್ವರ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಇವುಗಳು ಜಿಲ್ಲಾಸ್ಪತ್ರೆ ಅಜ್ಜರಕಾಡು, ಕೆಎಂಸಿ ಮಣಿಪಾಲ (ಖಾಸಗಿ), ತಾಲೂಕು ಆಸ್ಪತ್ರೆ ಕುಂದಾಪುರ ಮತ್ತು ಕಾರ್ಕಳ, ಸಮುದಾಯ ಆರೋಗ್ಯ ಕೇಂದ್ರಗಳಾದ ಬ್ರಹ್ಮಾವರ, ಬೈಂದೂರು, ಕೋಟ, ಶಿರ್ವ, ನಿಟ್ಟೆ, ಹೆಬ್ರಿಗಳಲ್ಲಿ ಕಾರ್ಯಾಚರಿಸುತ್ತಿವೆ.
ಈ ಎಲ್ಲಾ ಜ್ವರ ತಪಾಸಣಾ ಕ್ಲಿನಿಕ್‌ಗಳಲ್ಲಿ ಕೊರೋನ ಲಕ್ಷಣವನ್ನು ಗುರುತಿಸಲು ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸುವ ಹಾಗೂ ಕೋವಿಡ್ ಅಲ್ಲದ ಇತರ ಜ್ವರ ಪ್ರಕರಣಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.
ಇವುಗಳೊಂದಿಗೆ ಜಿಲ್ಲೆಯ ಎಲ್ಲಾ ದೊಡ್ಡ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳಲ್ಲಿ ಪ್ರತ್ಯೇಕ ಜ್ವರ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದರಿಂದ ಶಂಕಿತ ಕೋವಿಡ್ ಪ್ರಕರಣಗಳಲ್ಲಿ ಸೋಂಕಿತರು ಇತರರಿಗೆ ಅದನ್ನು ಹರಡುವುದನ್ನು ತಡೆಯಲು ಸಾಧ್ಯವಾಗಲಿದೆ.
ಕುಂದಾಪುರ ಮತ್ತು ಬೈಂದೂರು ತಾಲೂಕಿನ ಒಳಪ್ರದೇಶಗಳಿಂದ ಬರುವ ರೋಗಿಗಳಿಗಾಗಿ ಪ್ರತ್ಯೇಕ ತಪಾಸಣಾ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಇರುವ ಕಾರಣ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಜ್ವರ ತಪಾಸಣಾ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್-19 ಸೋಂಕು ಜನಸಾಮಾನ್ಯರು ಯಾರಿಗೂ ಕೂಡಾ ಹರಡ ಬಹುದಾಗಿದೆ. ಇದನ್ನು ಶೀಘ್ರ ಪತ್ತೆ ಹಚ್ಚಿ ತ್ವರಿತ ಚಿಕಿತ್ಸೆ ನೀಡುವುದರಿಂದ ಹತೋಟಿಗೆ ತರಬಹುದಾಗಿದೆ. ಆದುದರಿಂದ ಸಾರ್ವಜನಿಕರು ಯಾವುದೇ ಜ್ವರ, ಕೆಮ್ಮು, ಉಸಿರಾಟದ ತೊದರೆಯಂಥ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಜ್ವರ ತಪಾಸಣಾ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿ ಕೊಳ್ಳಲು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.







