ಕಣಜಾರು: ಗಾಳಿ ಮಳೆಯಿಂದ ಶಾಲೆಗೆ ಹಾನಿ
ಉಡುಪಿ, ಜೂ.20: ನಿನ್ನೆ ಬೀಸಿದ ಗಾಳಿ-ಮಳೆಗೆ ಕಾರ್ಕಳ ತಾಲೂಕು ಕಣಜಾರು ಗ್ರಾಮದ ಲೂರ್ಡ್ಸ್ ಕಾನ್ವೆಂಟ್ ಶಾಲೆಗೆ ಅಪಾರ ಹಾನಿಯುಂಟಾಗಿದೆ. ಇದರಿಂದ ಸುಮಾರು 30ಸಾವಿರ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕಚೇರಿಯಿಂದ ತಿಳಿದುಬಂದಿದೆ.
ಉಳಿದಂತೆ ನಿನ್ನೆ ಸಂಜೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಜಾರ್ಜ್ ವೆಲೇರಿಯನ್ ಡಿಸೋಜ ಅವರ ಮನೆಗೆ ಸಿಡಿಲು ಬಡಿದು 25ಸಾವಿರ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಅಲ್ಲದೇ ಕಾಪು ತಾಲೂಕಿನ ಕೋಟೆ ಗ್ರಾಮದ ಗಣೇಶ ಕೆ.ಸಾಲಿಯಾನ್ ಅವರ ಮನೆ ಮೇಲೆ ಮರಬಿದ್ದು 15 ಸಾವಿರ ರೂ., ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಜ್ಯೋತಿ ಎಂಬವರ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿ 30ಸಾವಿರ ರೂ.ನಷ್ಟ ಉಂಟಾದ ಬಗ್ಗೆಯೂ ವರದಿಗಳು ಬಂದಿವೆ.
ಇಂದು ಬೆಳಗ್ಗೆ 8:30ಗಂಟೆಗೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 37.60 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಈ ದಿನದ ಸಾಮಾನ್ಯ ಮಳೆ 45.10ಮಿ.ಮೀ ಆಗಿದೆ. ಉಡುಪಿಯಲ್ಲಿ 30.4ಮಿ.ಮೀ., ಕುಂದಾಪುರದಲ್ಲಿ 37.1ಮಿ.ಮೀ., ಕಾರ್ಕಳದಲ್ಲಿ 44.6ಮಿ.ಮೀ. ಮಳೆ ಸುರಿದಿದೆ ಎಂದು ವರದಿಗಳು ತಿಳಿಸಿವೆ.





