ಕೋವಿಡ್ ನಿರ್ವಹಣೆ: ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರದ ಶ್ಲಾಘನೆ- ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ. 20: ಮಾರಕ ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಸರಕಾರ ಶ್ಲಾಘಿಸಿದೆ. ಅಲ್ಲದೆ, ಕರ್ನಾಟಕದ ಈ ನಿರ್ವಹಣಾ ಮಾದರಿಗಳನ್ನು ಬೇರೆ ರಾಜ್ಯಗಳು ಅನುಸರಿಸಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಅವರು, ಕೊರೋನ ಪಾಸಿಟಿವ್ ಪ್ರಕರಣಗಳ ಸಂಪರ್ಕಕ್ಕೆ ಬಂದವರನ್ನು ಸಮಗ್ರವಾಗಿ ಪತ್ತೆ ಹಚ್ಚಲು ಮನೆಗಳ ಸಮೀಕ್ಷೆ, ದೂರವಾಣಿ ಆಧಾರಿತ ಸೇವೆ ಮುಂತಾದ ರಾಜ್ಯದ ನಿರ್ವಹಣಾ ಮಾದರಿಗಳನ್ನು ಇತರೆ ರಾಜ್ಯಗಳ ಅನುಸರಿಸಬೇಕು. ಸೋಂಕು ಹರಡುವಿಕೆ ತಡೆಯುವಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಈ ಯಶಸ್ಸು ಸಲ್ಲಬೇಕು. ಅದಕ್ಕಾಗಿ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.
ಹಂತ-ಹಂತವಾಗಿ ಲಾಕ್‍ಡೌನ್ ತೆರವಾಗುತ್ತಿರುವ ಈ ಸಂದರ್ಭದಲ್ಲಿ, ಇನ್ನೂ ಹೆಚ್ಚು ಎಚ್ಚರಿಕೆಯಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರಿನ ಹಲವೆಡೆ ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಅನಗತ್ಯ ಓಡಾಟಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ. ಅಗತ್ಯ ಕಾರ್ಯಗಳಿಗೆ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡತಕ್ಕದ್ದು. ಸುರಕ್ಷಿತ ಅಂತರ ಕಾಯ್ದುಕೊಂಡೆ ತಮ್ಮ ವ್ಯಾಪಾರ-ವಹಿವಾಟು ಹಾಗೂ ಇತರೆ ಕೆಲಸಗಳನ್ನು ನಡೆಸಬೇಕು
-ಆರ್.ಅಶೋಕ್, ಕಂದಾಯ ಸಚಿವ







