ಉಡುಪಿಯ ಹಲವೆಡೆ ತೀವ್ರ ಕಡಲ್ಕೊರೆತ: ತಡೆಗೋಡೆ ಸಮುದ್ರಪಾಲು

ಉಡುಪಿ, ಜೂ.20: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದು, ತೀವ್ರ ಕಡಲ್ಕೊರೆತದಿಂದ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳು ಸಮುದ್ರ ಪಾಲಾಗಿವೆ.
ಮಣೂರು ಪಡುಕೆರೆ, ಕಾಪು ಮೂಳೂರು ಗಂಗೊಳ್ಳಿ ತ್ರಾಸಿ ಗ್ರಾಮದ ಕಂಚುಗೋಡು ಎಂಬಲ್ಲಿ ಕಡಲ್ಕೊರೆತ ಕಂಡುಬಂದಿದ್ದು, ತೀರ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಂಚುಗೋಡುವಿನಲ್ಲಿ ಅಲೆಗಳಿಂದ ಭೂ ಪ್ರದೇಶ ಕುಸಿದು ನಾಲ್ಕೈದು ಮನೆಗಳು ಅಪಾಯದ ಅಂಚಿನಲ್ಲಿವೆ. ಆದರೆ ಈವರೆಗೆ ಇಲ್ಲಿ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಅದೇ ರೀತಿ ಮೂಳೂರು ಮತ್ತು ಮಣೂರು ಪಡುಕೆರೆಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿ, ಕಲ್ಲುಗಳು ಸಮುದ್ರ ಒಡಲು ಸೇರುತ್ತಿವೆ. ಅದೇ ರೀತಿ ಮಲ್ಪೆ ಬೀಚ್‌ನಲ್ಲೂ ಸಮುದ್ರದ ನೀರು ಆವರಿಸಿದ್ದು, ಇದರಿಂದ ಅಲ್ಲೇ ಸಮೀಪದ ಕಲ್ಲುಗಳು ಮರಳಿನಿಂದ ಉದುಗಿಹೋಗಿರುವುದು ಕಂಡುಬಂದಿದೆ. ಕೊರೆತದ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ಪರಿಹಾರ ಕಂಡು ಕೊಳ್ಳಲು ಸರಕಾರದಿಂದ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಕಳೆದ ವರ್ಷ ಈ ಭಾಗದಲ್ಲಿ ಸಂಭವಿಸಿರುವ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸಲು ಸರಕಾರಕ್ಕೆ 20 ಕೋಟಿ ರೂ. ಪ್ರಸ್ತಾವವನ್ನು ಇಲಾಖೆ ಕಳುಹಿಸಿತ್ತು. ಆದರೆ ಈವರೆಗೆ ಇದಕ್ಕೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








