ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡುವಂತೆ ಸಿಎಂಗೆ ಮನವಿ: ಎಚ್.ವಿಶ್ವನಾಥ್
ಮತ್ತೆ ವಿಧಾನಪರಿಷತ್ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ ಮಾಜಿ ಸಚಿವ

ಮೈಸೂರು,ಜೂ.20: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಬಳಿಕ ಮಾಜಿ ಸಚಿವ ಎಚ್.ವಿಶ್ವನಾಥ್ ಇದೀಗ ಮತ್ತೆ ಪರಿಷತ್ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ಬೇಸರ ಇಲ್ಲ. ನಾಮ ನಿರ್ದೇಶನದ ಮೂಲಕ ಪರಿಷತ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎಂದು ಎಚ್.ವಿಶ್ವನಾಥ್ ಹೇಳಿದರು.
ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ. ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದಾರೆ. ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡದು ಸಿಗುತ್ತೆ. ಕೆಲವೊಮ್ಮೆ ಏನೂ ಸಿಗೋದೆ ಇಲ್ಲ. ರಾಜಕಾರಣ ಅಂದರೆ ಸಿಗೋದು, ಪಡೆದುಕೊಳ್ಳೋದಲ್ಲ. ನಾನೊಬ್ಬ ಬರಹಗಾರ, ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದು, ಆಗಬಹುದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ನನ್ನನ್ನು ನಾಮ ನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ. ಮೆಲ್ಮನೆಗೆ ಆಯ್ಕೆಯಾಗುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ನಾಮ ನಿರ್ದೇಶನ ಮಾಡುವ ವಿಶ್ವಾಸ ಇದೆ. ಈ ರಾಜ್ಯದಲ್ಲಿ ನಾಲಗೆ ಮೇಲೆ ನಿಂತ ನಾಯಕ ಅಂದರೆ ಅದು ಯಡಿಯೂರಪ್ಪ. ಆ ಮಾತಿಗೆ ಈಗಲೂ ನಾನು ಬದ್ಧ ಎಂದು ಎಚ್.ವಿಶ್ವನಾಥ್ ಹೇಳಿದರು.
ಇನ್ನೇನಿದ್ದರೂ ಎಚ್.ವಿಶ್ವನಾಥ್ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ನೊಡ್ಕೊಬೇಕು ಎಂಬ ಶಾಸಕ ಸಾ.ರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಎಚ್.ವಿಶ್ವನಾಥ್, ಕೊಚ್ಚೆಗುಂಡಿಗೆ ಕಲ್ಲೆಸೆಯುವ ಪ್ರಯತ್ನ ಮಾಡಲ್ಲ. ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.







