ಬೆಂಗಳೂರು: ಕ್ವಾರಂಟೈನ್ ನಲ್ಲಿದ್ದ ಯುವತಿಯರ ಅತ್ಯಾಚಾರಕ್ಕೆ ಯತ್ನ; ಆರೋಪ
ಆರೋಪಿ ಬಂಧನ

ಬೆಂಗಳೂರು, ಜೂ.20: ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನ ನಡೆದಿರುವ ಘಟನೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ. ಜೈಶಂಕರ್ ಅತ್ಯಾಚಾರಕ್ಕೆ ಯತ್ನಿಸಿ, ಬಂಧಿತನಾಗಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ದೂರು ದಾಖಲಾಗಿದೆ. ಮುಂಬೈನಿಂದ ಆಗಮಿಸಿದ ಯುವತಿಯನ್ನು ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಸರಕಾರಿ ವಸತಿ ನಿಲಯದಲ್ಲಿ 7 ದಿನ ಕ್ವಾರಂಟೈನ್ ಮಾಡಲಾಗಿತ್ತು. ವಸತಿ ನಿಲಯದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಶೌಚಾಲಯದ ವ್ಯವಸ್ಥೆಯಿದೆ. ಶೌಚಾಲಯಕ್ಕೆ ಹೋದ ಯುವತಿಗೆ ಜೈಶಂಕರ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿ ಶೌಚಾಲಯಕ್ಕೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ಜೈಶಂಕರ್ ಬಾಗಿಲು ಹಾಕಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ವಿರೋಧಿಸುತ್ತಿದ್ದಂತೆ ಹೊರ ಬಂದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿ, ಯುವತಿ ಕೋಣೆಗೆ ಹೋಗುತ್ತಿದ್ದಂತೆ ಆಕೆಯ ಕೊಠಡಿಯಲ್ಲಿದ್ದ ಮತ್ತೋರ್ವ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





