ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ: ಉಡುಪಿ ಡಿಸಿ ಜಗದೀಶ್
ಉಡುಪಿ, ಜೂ.20: ಜಿಲ್ಲೆಗೆ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಆಗಮಿಸುವವರನ್ನು ಸರಕಾರದ ನಿರ್ದೇಶನದಂತೆ 14 ದಿನಗಳ ಹೋಂ ಕ್ವಾರಂಟೈನ್ನಲ್ಲಿ ಇರಿಸಿ ಅವರ ಮನೆಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಈ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮೊದಲ ಬಾರಿ ಎಚ್ಚರಿಕೆ ಮತ್ತು ಎರಡನೆ ಬಾರಿದೆ ಎಫ್ಐಆರ್ ದಾಖಲಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದವರನ್ನು ಹೋಂ ಕ್ವಾರಂಟೈನ್ನಿಂದ ಸಾಂಸ್ಥಿಕ ಕ್ವಾರಂಟೈನ್ಗೆ ವರ್ಗಾಯಿಸಲಾಗುವುದು. ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬರುತ್ತಿರುವ ಕಾರಣ ಹೋಂ ಕ್ವಾರಂಟೈನ್ ಬಗ್ಗೆ ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಹಾಗೂ ಕೋವಿಡ್ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹೊರಡಿಸಲಾಗಿರುವ ಇತರೆ ನಿರ್ದೇಶನಗಳನ್ನು ಪಾಲಿಸದೆ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.