ಭಾರತದಲ್ಲಿ ಕೊರೋನ ಉಲ್ಬಣ: 24 ತಾಸುಗಳಲ್ಲಿ 14,516 ಮಂದಿಗೆ ಸೋಂಕು

ಹೊಸದಿಲ್ಲಿ, ಜೂ.20: ಭಾರತದಲ್ಲಿ ಕೊರೋನ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲವಾಗಿದ್ದು, ಕಳೆದ 24 ತಾಸುಗಳಲ್ಲಿ 14,516 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಈವರೆಗಿನ ಒಂದು ದಿನದ ಗರಿಷ್ಠ ಸಂಖ್ಯೆಯಾಗಿದೆ.
ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ ಈಗ 3,95,048ಕ್ಕೇರಿದೆ. ಈ ಮಧ್ಯೆ 375 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದು ಸೋಂಕಿನಿಂದ ಮೃತರಾದವರ ಸಂಖ್ಯೆ 12,948ನ್ನು ತಲುಪಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಈವರೆಗೆ ದೇಶಾದ್ಯಂತ ಒಟ್ಟು 2,13,830 ಮಂದಿ ಸೋಂಕಿತರು ಗುಣಮುಖರಾಗಿದ್ದು, 1,68,269 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಕಳೆದ 9 ದಿನಗಳಿಂದ ಸತತವಾಗಿ ಭಾರತದಲ್ಲಿ ಪ್ರತಿ ದಿನವೂ 10 ಸಾವಿರಕ್ಕಿಂತಲೂ ಅಧಿಕ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಜೂನ್ 1ರಿಂದ 20ನೇ ತಾರೀಕಿನವರೆಗೆ ದೇಶದಲ್ಲಿ ಸೋಂಕಿನ ಪ್ರಕರಣಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಹೆಚ್ಚಳವಾಗಿದೆ. ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಗುಜರಾತ್ ಹಾಗೂ ಉತ್ತರಪ್ರದೇಶ, ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರವಾದ ಏರಿಕೆಯನ್ನು ಕಾಣುತ್ತಿರುವ ಮೊದಲ 5 ರಾಜ್ಯಗಳಾಗಿವೆ.





