ಭಾರತದಲ್ಲಿ ಕೊರೋನ ಚಿಕಿತ್ಸೆಗೆ ‘ಫ್ಯಾಬಿಫ್ಲೂ’ ಔಷಧಿ
ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಹೊಸದಿಲ್ಲಿ,ಜೂ.21: ಸೌಮ್ಯದಿಂದ ಸಾಧಾರಣ ತೀವ್ರತೆಯ ಕೋವಿಡ್-19 ಸೋಂಕಿನಿಂದ ಬಾಧಿತರಾಗಿರುವ ರೋಗಿಗಳ ಚಿಕಿತ್ಸೆಗಾಗಿ ಭಾರತದ ಖ್ಯಾತ ಔಷಧಿ ತಯಾರಕ ಸಂಸ್ಥೆಯೊಂದು ವೈರಾಣು ನಿರೋಧಕ ಔಷಧಿಯನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನೊಂದಿಗೆ ಗ್ಲೆನ್ ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಕಂಪೆನಿಯು ಫ್ಯಾವಿಪಿರಾವಿರ್ ಸಂಯೋಜನೆಯ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಔಷಧಿಗೆ ಭಾರತದ ಮಹಾ ಔಷಧಿ ನಿಯಂತ್ರಣಾಧಿಕಾರಿ (ಡಿಸಿಜಿಐ)ಯವರಿಂದ ಅನುಮೋದನೆ ದೊರೆತಿದೆ.
34 ಮಾತ್ರೆಗಳಿರುವ ಈ ಔಷಧಿಯ ಪ್ಯಾಕ್‌ಗೆ 3500 ರೂ. ಬೆಲೆಯಿದೆ (ಪ್ರತಿ ಮಾತ್ರೆಗೆ 103 ರೂ.). ಮೊದಲನೆಯ ದಿನದಂದು 200 ಮಿ.ಗ್ರಾಂ.ನ 9 ಮಾತ್ರೆಗಳನ್ನು ರೋಗಿಯು ಸೇವಿಸಬೇಕಿದ್ದು, ಆನಂತರದ 14 ದಿನಗಳ ಕಾಲ 200 ಮಿ.ಗ್ರಾಂ.ನ 4 ಮಾತ್ರೆಗಳನ್ನು ಪ್ರತಿ ದಿನ ಸೇವಿಸಬೇಕಿದೆ.
ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮುನ್ನ ಗ್ಲೆನ್‌ಮಾರ್ಕ್ ಸಂಸ್ಥೆಯು ದೇಶಾದ್ಯಂತ 11 ಸ್ಥಳಗಳಲ್ಲಿ ಸೌಮ್ಯದಿಂದ ಸಾಧಾರಣಾ ತೀವ್ರತೆಯ ಕೋವಿಡ್-19 ರೋಗಿಗಳ ಮೇಲೆ ಅದರ ಕ್ಲಿನಿಕಲ್ ಟ್ರಯಲ್ ನಡೆಸಿತ್ತು.
ಈ ಮಧ್ಯೆ ದಿಲ್ಲಿ ಮೂಲದ ಬ್ರಿಂಟನಂ ಫಾರ್ಮಾಸ್ಯೂಟಿಕಲ್ಸ್, ಬೆಂಗಳೂರಿನ ಸ್ಟ್ರೈಡ್ಸ್ ಫಾರ್ಮಾ, ಮುಂಬೈ ಮೂಲದ ಲಾಸಾ ಸುಪರ್‌ಜೆನೆರಿಕ್ಸ್, ಹೈದರಾಬಾದ್‌ನ ಒಪ್ಟಿಮಸ್ ಫಾರ್ಮಾ ಕೂಡಾ ಕೋವಿಡ್-19 ರೋಗಿಗಳಿಗಾಗಿ ಔಷಧಿ ಸಿದ್ಧಪಡಿಸಿದ್ದು, ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ.







