ಅಕ್ರಮ ದಾಸ್ತಾನು: 88 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದ ಆಹಾರ ಇಲಾಖೆ ಅಧಿಕಾರಿಗಳು
ಬೆಳಗಾವಿ, ಜೂ.20: ಲಾಕ್‍ಡೌನ್ ಜಾರಿ ಸಂದರ್ಭದಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಇರುವವರಿಗೆ ಸರಕಾರ ಅಕ್ಕಿ ಸೇರಿ ಇತರೆ ಸಾಮಗ್ರಿಗಳನ್ನು ಹೆಚ್ಚಿನ ರೀತಿಯಲ್ಲಿ ಹಂಚಿಕೆ ಮಾಡಿತ್ತು. ಆದರೆ, ಜನರು ತಮಗೆ ಬೇಕಾಗುವಷ್ಟು ಸಾಮಗ್ರಿಗಳನ್ನಿಟ್ಟುಕೊಂಡು, ಉಳಿದಿದ್ದನ್ನು ದಂಧೆಕೋರರಿಗೆ ಮಾರಾಟ ಮಾಡಿದ್ದು, ಈ ಎಲ್ಲ ಸಾಮಗ್ರಿಗಳೂ ಈಗ ಮಹಾರಾಷ್ಟ್ರದಲ್ಲಿ ಮಾರಾಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ದಂಧೆಕೋರರು ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರಿಂದ ಅಕ್ಕಿಯನ್ನು ಕಡಿಮೆ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಕುಟುಂಬದ ಒಬ್ಬ ಸದಸ್ಯರಿಗೆ ತಲಾ 5 ಕೆ.ಜಿ.ಅಕ್ಕಿ ಕೊಡಲಾಗುತ್ತಿತ್ತು. ಆ ಅಕ್ಕಿಯನ್ನೂ ದಂಧೆಕೋರರು ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 88 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಅಕ್ಕಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಎರಡ್ಮೂರು ತಿಂಗಳಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡು ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ವಿತರಣೆಯಾಗುತ್ತಿದೆ. ಅಲ್ಲದೆ, ವಿವಿಧ ಸಂಘಟನೆಗಳ ಮುಖಂಡರು ಅಕ್ಕಿಯ ಕಿಟ್‍ಗಳನ್ನು ವಿತರಣೆ ಮಾಡಿದ್ದಾರೆ. ಇದರ ಲಾಭ ಪಡೆದ ದಂಧೆಕೋರರು ಬಡವರಿಂದ ಅಕ್ಕಿಯನ್ನು ಪಡೆದು ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ.





