ಲಡಾಖ್ ಬಗ್ಗೆ ಮೋದಿ, ಕೇಂದ್ರ ಸರಕಾರದ ಹೇಳಿಕೆಯನ್ನು ಅಳಿಸಿ ಹಾಕಿದ ಚೀನಾದ ಸಾಮಾಜಿಕ ಜಾಲತಾಣ

ಬೀಜಿಂಗ್: ಜೂನ್ 18ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಯ ಭಾಷಣ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ನೀಡಿರುವ ಹೇಳಿಕೆಯನ್ನು ಚೀನಾದ ಸಾಮಾಜಿಕ ಜಾಲತಾಣ ಖಾತೆಗಳು ಡಿಲಿಟ್ ಮಾಡಿವೆ ಎಂದು ಚೀನಾದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಿ ಸೈನಿಕರ ನಡುವೆ ಘರ್ಷಣೆ ಮತ್ತು 20 ಯೋಧರು ಹುತಾತ್ಮರಾದ ಘಟನೆಯ ನಂತರ ಈ ಬೆಳವಣಿಗೆ ನಡೆದಿದೆ.
ರಾಯಭಾರ ಕಚೇರಿಯ Sina Weibo ಖಾತೆಯಲ್ಲಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರ ಹೇಳಿಕೆಗಳನ್ನು ಜೂನ್ 18ರಂದು ಅಳಿಸಿ ಹಾಕಲಾಗಿದೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
Sina Weibo ಟ್ವಿಟರ್ ನಂತಹ ಸಾಮಾಜಿಕ ಜಾಲತಾಣವಾಗಿದ್ದು, ಚೀನಾದಲ್ಲಿ ಮಿಲಿಯಗಟ್ಟಲೆ ಬಳಕೆದಾರರಿದ್ದಾರೆ. ಬೀಜಿಂಗ್ ನಲ್ಲಿರುವ ಎಲ್ಲಾ ರಾಯಭಾರ ಕಚೇರಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರು ಚೀನಿ ಜನರೊಂದಿಗೆ ಸಂಪರ್ಕ ಸಾಧಿಸುವುದಕ್ಕಾಗಿ ಇದರಲ್ಲಿ ಖಾತೆಗಳನ್ನು ತೆರೆದಿದ್ದಾರೆ.
ಇಷ್ಟೇ ಅಲ್ಲದೆ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಯನ್ನು ಖಾತೆಯಿಂದಲೂ WeChat ತೆಗೆದು ಹಾಕಲಾಗಿದೆ. ‘ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಈ ಕಂಟೆಂಟ್ ಕಾಣುತ್ತಿಲ್ಲ” ಎಂದು WeChat ಖಾತೆ ತೋರಿಸುತ್ತಿದೆ.
ಗಲ್ವಾನ್ ನಲ್ಲಿ ಯೋಧರು ಹುತಾತ್ಮರಾದ ಬಗ್ಗೆ ಪ್ರಧಾನಿ ಮೋದಿಯವರು ನೀಡಿದ್ದ ಹೇಳಿಕೆಯೂ WeChat ನಿಂದ ಮಾಯವಾಗಿದೆ.







