ಬೆಂಗಳೂರಿನಲ್ಲಿ ಸಾವಿರದ ಗಡಿ ದಾಟಿದ ಕೊರೋನ ಪ್ರಕರಣ
ಸಾವಿನ ಸಂಖ್ಯೆ 61ಕ್ಕೆ ಏರಿಕೆ

ಬೆಂಗಳೂರು, ಜೂ.20: ನಗರದಲ್ಲಿ ಶನಿವಾರ 94 ಕೊರೋನ ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಪೊಲೀಸರು, ಮೆಡಿಕಲ್ ವಿದ್ಯಾರ್ಥಿಗಳು, ಬಿಎಂಟಿಸಿ ಸಿಬ್ಬಂದಿಗಳು ಸೇರಿದ್ದು, ಈ ಮೂಲಕ ನಗರದ ಒಟ್ಟು ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ನಗರದಲ್ಲಿ ಇಲ್ಲಿಯವರೆಗೆ 1,083 ಸೋಂಕಿತರು ಪತ್ತೆಯಾಗಿದ್ದಾರೆ. 621 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 61 ಜನರು ಸೋಂಕಿಗೆ ಬಲಿಯಾಗಿದ್ದು, ಶನಿವಾರ ಓರ್ವ ವ್ಯಕ್ತಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 36 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 14,909 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ನಗರದಲ್ಲಿ 279 ಕಂಟೈನ್ಮೆಂಟ್ ಝೋನ್ ಗಳನ್ನು ಮಾಡಲಾಗಿದೆ.
ಇನ್ನು ನಗರದಲ್ಲಿ ಶನಿವಾರ ದಾಖಲಾದ 94 ಪ್ರಕರಣದಲ್ಲಿ ತಮಿಳುನಾಡಿನಿಂದ ಇಬ್ಬರು ಹಾಗೂ ದಮನ್‍ನಿಂದ ಬಂದಿರುವ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರದಲ್ಲಿ 64 ವರ್ಷದ ವ್ಯಕ್ತಿ, 58 ವರ್ಷದ ವ್ಯಕ್ತಿ ಹಾಗೂ 39 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಯೋಧರಿಗೆ ಕೊರೋನ: ಕೊರೋನ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರಲ್ಲಿ ಸೋಂಕು ಪತ್ತೆಯಾಗಿದೆ. ಕೋರಮಂಗಲದಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರಲ್ಲಿ ಕೊರೋನ ಪತ್ತೆಯಾಗಿದೆ. ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಿಬ್ಬಂದಿ ಈ ಹಿಂದೆ 25 ಮಂದಿ ಸ್ನೇಹಿತರ ಜತೆಗೂಡಿ ಹುಟ್ಟುಹಬ್ಬದ ಆಚರಣೆ ಮಾಡಿದ್ದು, ಅವರಿಗೂ ಸೋಂಕು ತಗಲುವ ಆತಂಕವಿದೆ.
ಕಳೆದ 3 ತಿಂಗಳಿಂದ ಕೊರೋನ ಸೋಂಕು ನಿವಾರಣೆ ಕಾರ್ಯದಲ್ಲಿ ಬಿಡುವಿಲ್ಲದೇ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಪ್ರತಿನಿತ್ಯ ಸಾರ್ವಜನಿಕರ ಸಂಪರ್ಕದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಸಾರ್ವಜನಿಕ ಸೇವೆಯಲ್ಲಿ ನಿರತರಾದ ವೇಳೆ ವಿವಿಧ ಮೂಲಗಳಿಂದ ಸೋಂಕಿತರ ಸಂಪರ್ಕಕ್ಕೆ ಒಳಗಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದೇ ರೀತಿ ಬೆಂಗಳೂರಿನಲ್ಲಿ ಈವರಗೆ 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 9 ಬಿಎಂಟಿಸಿ ಸಿಬ್ಬಂದಿ, 15 ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಿಗೂ ಸೋಂಕು ದೃಢಪಟ್ಟಿದೆ.
ವಾರ್ತಾ ಇಲಾಖೆ ಅಧಿಕಾರಿಗೆ ಕೊರೋನ
ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೋಂಕು ದೃಢಪಟ್ಟಿದೆ. ಅವರ ಪತ್ನಿಗೆ ಸೋಂಕು ಪತ್ತೆಯಾಗಿದ್ದು, ಅವರ ಸಂಪರ್ಕದಲ್ಲಿದ್ದ ಇವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ವಾರ್ತಾ ಇಲಾಖೆ ಕಚೇರಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ, ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‍ಗೆ ರವಾನಿಸಲಾಗಿದೆ.
ಮಾಸ್ಕ್ ಧರಿಸದವರಿಂದ 2.71 ಲಕ್ಷ ರೂ.ದಂಡ ವಸೂಲಿ
ಕೊರೋನ ಸೋಂಕು ನಿಯಂತ್ರಿಸುವ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದ ಹಾಗೂ ಮುಖಗವಸು ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಗೆ ಮಾರ್ಷಲ್ ಗಳು ದಂಡ ವಿಧಿಸಿದ್ದಾರೆ. ಮಾಸ್ಕ್ ಧರಿಸದ 1,316 ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದ 35 ಮಂದಿ ಸೇರಿದಂತೆ 1,351 ಮಂದಿಯಿಂದ ಒಟ್ಟು 2.71 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.







