ಕೊರೋನ ವೈರಸ್ ‘ಅಪಾಯಕಾರಿ ಹಂತ’ದಲ್ಲಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 20: ಜಗತ್ತು ಈಗ ಕೊರೋನ ವೈರಸ್ ಸಾಂಕ್ರಾಮಿಕದ ‘ಹೊಸ ಹಾಗೂ ಅಪಾಯಕಾರಿ ಹಂತ’ದಲ್ಲಿದೆ, ಸಾಂಕ್ರಾಮಿಕ ಹರಡುವಿಕೆಯ ವೇಗ ಹೆಚ್ಚುತ್ತಿರುವ ಹೊರತಾಗಿಯೂ ಜನರು ಬೀಗಮುದ್ರೆಗಳಿಂದ ರೋಸಿಹೋಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಚ್ಚರಿಸಿದೆ.
ಸಾಂಕ್ರಾಮಿಕದಿಂದಾಗಿ ಈವರೆಗೆ ಜಗತ್ತಿನಾದ್ಯಂತ 4,54,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 84 ಲಕ್ಷಕ್ಕೂ ಅಧಿಕ ಮಂದಿ ಸೋಂಕುಪೀಡಿತರಾಗಿದ್ದಾರೆ. ಈಗ ಸಾಂಕ್ರಾಮಿಕವು ಅಮೆರಿಕ ಖಂಡಗಳು ಮತ್ತು ಏಶ್ಯದ ಕೆಲವು ಭಾಗಗಳಲ್ಲಿ ಏರುಗತಿಯಲ್ಲಿದೆ ಹಾಗೂ ನಿರ್ಬಂಧಗಳನ್ನು ಸಡಿಲಿಸುವ ಪ್ರಕ್ರಿಯೆಯನ್ನು ಯುರೋಪ್ ಆರಂಭಿಸಿದೆ.
ಕೊರೋನ ವೈರಸ್ ಹರಡುವುದನ್ನು ತಡೆಯಲು ಹಾಕಲಾಗಿರುವ ಬೀಗಮುದ್ರೆಗಳಿಂದಾಗಿ ಜಾಗತಿಕ ಆರ್ಥಿಕತೆಯು ನೆಲಕಚ್ಚಿದೆ. ಆದರೆ, ಸಾಂಕ್ರಾಮಿಕವು ಈಗಲೂ ದೊಡ್ಡ ಬೆದರಿಕೆಯಾಗಿಯೇ ಮುಂದುವರಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
‘‘ಜಗತ್ತು ಈಗ ಹೊಸ ಹಾಗೂ ಅಪಾಯಕಾರಿ ಹಂತದಲ್ಲಿದೆ. ಹೆಚ್ಚಿನವರು ಮನೆಯಲ್ಲಿದ್ದು ರೋಸಿ ಹೋಗಿದ್ದಾರೆ. ಅದು ಸಹಜವೂ ಹೌದು. ಆದರೆ, ವೈರಸ್ ಈಗಲೂ ವೇಗವಾಗಿ ಹರಡುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವೈರಸ್‌ನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಹಾಗೂ ಗುರುತಿಸಲ್ಪಡುವ ಮೊದಲು ಅದು ಎಲ್ಲಿಯವರೆಗೆ ಹರಡಬಹುದು ಎಂಬ ವಿಷಯದಲ್ಲಿ ವಿಜ್ಞಾನಿಗಳು ಇನ್ನೂ ಸಂಶೋಧನೆಯಲ್ಲಿ ತೊಡಗಿರುವಂತೆಯೇ, ಸಾಂಕ್ರಾಮಿಕಕ್ಕೆ ಲಸಿಕೆ ಸಿದ್ಧವಾಗಲು ಇನ್ನೂ ತಿಂಗಳುಗಳೇ ಬೇಕಾಗಬಹುದು ಎಂದು ಪರಿಣತರು ಹೇಳುತ್ತಾರೆ.







