ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತೆ 2 ಕೆ.ಜಿ ಕಡಿತ ?

ಬೆಂಗಳೂರು, ಜೂ.20: ರಾಜ್ಯದ ಆರ್ಥಿಕ ಹೊರೆ ತಗ್ಗಿಸಲು ಮೂರು ತಿಂಗಳ ಹಿಂದೆಷ್ಟೇ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತಗೊಳಿಸಿದ್ದ ರಾಜ್ಯ ಸರಕಾರ ಇದೀಗ ಮತ್ತೆ 2 ಕೆಜಿ ಅಕ್ಕಿ ಕಡಿತ ಮಾಡಲು ಮುಂದಾಗಿದ್ದು, ಅದಕ್ಕೆ ಪರ್ಯಾಯವಾಗಿ ತಲಾ 2 ಕೆ.ಜಿ ಗೋಧಿ ಅಥವಾ ಜೋಳ ವಿತರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಪ್ರತಿ ತಿಂಗಳು ಬಿಪಿಎಲ್ ಕಾರ್ಡ್‍ದಾರರಿಗೆ ವಿತರಿಸುವ 5 ಕೆಜಿ ಅಕ್ಕಿ ಪ್ರಮಾಣವನ್ನು 3 ಕೆಜಿಗೆ ಇಳಿಸಿ, ಬದಲಿಗೆ ತಲಾ 2 ಕೆಜಿ ರಾಗಿ ಅಥವಾ ಜೋಳ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಆಯಾ ಜಿಲ್ಲೆಯ ಜಂಟಿ ನಿರ್ದೇಶಕರಿಗೆ ಈಗಾಗಲೇ ಮೌಖಿಕ ಸೂಚನೆ ನೀಡಿರುವ ಇಲಾಖೆ, ಜು 1ರಿಂದ ಫಲಾನಭವಿಗಳಿಗೆ ಹೊಸ ನಿಯಮದಡಿ ಅಕ್ಕಿ ವಿತರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದೆ.
ದಕ್ಷಿಣಕ್ಕೆ ರಾಗಿ, ಉತ್ತರಕ್ಕೆ ಜೋಳ: ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಹಾಗೂ ಪ್ರತಿ ಕಾರ್ಡ್‍ಗೆ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ಜೋಳ ಹಾಗೂ ಪ್ರತಿ ಕಾರ್ಡ್‍ಗೆ 2 ಕೆಜಿ ಗೋಧಿ ವಿತರಿಸಲು ನಿರ್ಧರಿಸಿದೆ. ಈಗಾಗಲೇ ಭಾರತ ಆಹಾರ ನಿಗಮದ ಗೋದಾಮುಗಳಿಂದ ಇಲಾಖೆಯ ಸಗಟು ಮಳಿಗೆಗಳಿಗೆ ಹೊಸ ನಿಯಮದಡಿ ರೇಷನ್ ಎತ್ತುವಳಿ ಮಾಡಲಾಗುತ್ತಿದೆ.
ಎಲ್ಲೆಲ್ಲಿ ಬದಲಾವಣೆ?
ದಕ್ಷಿಣ ಕರ್ನಾಟಕ ಭಾಗದ ಬೆಂಗಳೂರು, ಬೆಂ.ಗ್ರಾ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜು.1ರಿಂದ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲಾಗುತ್ತದೆ. ಅದೇ ರೀತಿ ರಾಯಚೂರು ಹಾಗೂ ಬಳ್ಳಾರಿಯಲ್ಲಿ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ಜೋಳ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲಾಗುತ್ತದೆ. ಆದರೆ, ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ಉತ್ತರ ಕನ್ನಡ, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ಹಿಂದಿನ ನಿಯಮದಂತೆ ರೇಷನ್ ವಿತರಿಸಲಾಗುತ್ತದೆ.
ವರ್ಷಕ್ಕೆ 800 ಕೋಟಿ ಉಳಿಕೆ
ಮೂರು ತಿಂಗಳ ಹಿಂದೆಯಷ್ಟೇ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರಿಂದ ಸರಕಾರದ ಬೊಕ್ಕಸಕ್ಕೆ 400 ಕೋಟಿ ರೂ. ಉಳಿತಾಯವಾಗಿತ್ತು. ಇದೀಗ 5 ಕೆಜಿ ಅಕ್ಕಿಯನ್ನು 3 ಕೆಜಿಗೆ ಇಳಿಸಿದ್ದರಿಂದ ಮತ್ತೆ 400 ಕೋಟಿ ರೂ.ಉಳಿತಾಯವಾಗಲಿದೆ. ಹೀಗಾಗಿ, ಒಟ್ಟಾರೆ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ಸರಕಾರಕ್ಕೆ 800 ಕೋಟಿ ರೂ. ಆರ್ಥಿಕ ಹೊರೆ ತಗ್ಗಲಿದೆ.







