ದತ್ತಿ ಪ್ರಶಸ್ತಿಗಳಿಗೆ ಅರ್ಜಿಆಹ್ವಾನ
ಬೆಂಗಳೂರು, ಜೂ.20: ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿ. ಗೌರಮ್ಮಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ, ಅಂತರ್ ರಾಷ್ಟ್ರೀಯ ಮಹಿಳಾ ವರ್ಷದ 'ಮಹಿಳಾ ದತ್ತಿ' ಸೇರಿದಂತೆ 48 ಪ್ರಕಾರಗಳ ವಿವಿಧ ದತ್ತಿ ನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಿಕೊಡಲು ಅವಕಾಶ ನೀಡಲಾಗಿದ್ದು, ಆಸಕ್ತರು ಕಳುಹಿಸಿಕೊಡಬಹುದಾಗಿದೆ.
ಪುಸ್ತಕಗಳನ್ನು ಕಳುಹಿಸುವವರು ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-560 018 ಇಲ್ಲಿಗೆ ಜುಲೈ 31 ರೊಳಗೆ ತಲುಪುವಂತೆ ಕಳುಹಿಸಬೇಕು. ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.
ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ. ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ. ಪಿಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸತಕ್ಕದ್ದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು. ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಬರೆಯಬಹುದು. ಹೆಚ್ಚಿನ ವಿವರ ಹಾಗೂ ದತ್ತಿಗಳ ವಿವರನ್ನು ಪರಿಷತ್ತಿನ ವೆಬ್‍ಸೈಟ್ www.kasapa.in ಮೂಲಕ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.







