ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಡಿಯೂರಪ್ಪ ಯಶಸ್ವಿ: ಗೃಹ ಸಚಿವ ಬೊಮ್ಮಾಯಿ

ಚಿತ್ರದುರ್ಗ, ಜೂ. 20: ರಾಜ್ಯದ ಜನತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಶಕ್ತಿ ಏನು ಎಂಬುದನ್ನು ಕಾಲ ಕಾಲಕ್ಕೆ ತೋರಿಸಿದ್ದಾರೆ. ಈ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಜಿಎಸ್‍ಟಿಗೆ ಸಂಬಂಧಿಸಿದಂತೆ 4,300 ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಎಚ್.ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ ಎಂಬ ವರಿದಿಗಳನ್ನು ತಳ್ಳಿಹಾಕಿದ ಅವರು, ವಿಶ್ವನಾಥ್‍ಗೆ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ ಕೊರೋನ ಪೀಡಿತರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಕುರಿತು ಕಳೆದ ಬಾರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಬೇಕು ಎಂದು ಸೂಚಿಸಲಾಗಿದ್ದು, ಇದಕ್ಕೆ ತಗುಲುವ ವೆಚ್ಚದ ಪಟ್ಟಿ ಕೊಟ್ಟಿದ್ದಾರೆ. ಮುಂದಿನ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.







