ಎಪಿಎಂಸಿ 'ಸೆಸ್' ಇಳಿಕೆ ಕುರಿತು ಸಿಎಂ ಜತೆ ಚರ್ಚೆ: ಸಚಿವ ಸೋಮಶೇಖರ್

ಹುಬ್ಬಳ್ಳಿ, ಜೂ. 20; ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಕಲಾಗುತ್ತಿರುವ ಶೇ.1.5ರಷ್ಟು ಸೆಸ್ ಅನ್ನು ತೆಗೆದು ಹಾಕುವ ಸಂಬಂಧ ಚರ್ಚೆ ನಡೆಯುತ್ತಿದೆ. ಆದರೆ, ಎಪಿಎಂಸಿಗೆ ಬರುವ ಈ ಹಣವನ್ನು ವೇತನ, ಸ್ವಚ್ಚತೆ ಸೇರಿದಂತೆ ಇನ್ನಿತರ ಅಗತ್ಯತೆಗಳಿಗೆ ವೆಚ್ಚ ಮಾಡಲಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಸಿ. ಸೋಮಶೇಖರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ವ್ಯಾಪಾರಸ್ಥರ ಸಂಘ ಇಲ್ಲಿನ ಬಸವೇಶ್ವರ ಮಾರ್ಕೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಪಿಎಂಸಿ ಸೆಸ್ ಹೆಚ್ಚಳ ಬಗ್ಗೆ ತನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಶೀಘ್ರದಲ್ಲೆ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಚರ್ಚಿಸಿ ಇಳಿಕೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯ 83 ಮಂದಿಗೆ ಕೊರೋನ ಸೋಂಕು ದೃಢಪಟ್ಟ ಸಂದರ್ಭದಲ್ಲಿ ದೊಡ್ಡ ತಲೆ ನೋವಾಗಿತ್ತು. ಆ ಸಮಯದಲ್ಲಿ ಕಾರ್ಖಾನೆ ಮುಚ್ಚಬೇಕೋ, ಬೇಡವೋ ಎಂಬ ಗೊಂದಲ ಸೃಷ್ಟಿಯಾಗಿತ್ತು. ಆಗ ಮಧ್ಯಪ್ರವೇಶಿಸಿದ ಸಚಿವ ಜಗದೀಶ್ ಶೆಟ್ಟರ್ ಕೂಡಲೇ ಸಮಸ್ಯೆ ಬಗೆಹರಿಸಿದರು ಎಂದು ಸೋಮಶೇಖರ್ ನೆನಪು ಮಾಡಿಕೊಂಡರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಎಪಿಎಂಸಿ ಸೆಸ್ ಹೆಚ್ಚಳವಾಗಿದ್ದು, ಇದು ಸಮಸ್ಯೆಯಾಗಿದೆ. ಕೆಲ ಹಳೆಯ ಬಾಕಿ ಮನ್ನಾ ಮಾಡುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಸಮಸ್ಯೆ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ವರ್ತಕರ ಸಂಘದ ಪರಣ್ಣ ಮನವಳ್ಳಿ, ಬಸವರಾಜ ಯಕಲಾಸಪೂರ ಸೇರಿದಂತೆ ಇನ್ನಿತರರು ಹಾಜರಿದ್ದರು.







