ಸುರಕ್ಷಿತವಾಗಿ ಕಂಕಣ ಸೂರ್ಯಗ್ರಹಣ ವೀಕ್ಷಿಸುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಲಹೆ

ಬೆಂಗಳೂರು, ಜೂ.20: ರವಿವಾರ( ಜೂ.21) ಸಂಭವಿಸಲಿರುವ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಣೆ ಮಾಡುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಲಹೆ ನೀಡಿದೆ.
ಗ್ರಹಣದ ವೈಜ್ಞಾನಿಕ ಸತ್ಯಎಲ್ಲರಿಗೂ ತಿಳಿದಿದ್ದರೂ ಕೆಲವು ಜ್ಯೋತಿಷಿಗಳು ಈ ಗ್ರಹಣ ಅಪಾಯಕಾರಿ, ನೋಡಬಾರದು, ಗಂಡಾಂತರ ಕಾದಿದೆ ಎಂದು ಹೇಳುತ್ತಾ ಭಯ ಉಂಟು ಮಾಡುತ್ತಿರುವುದು ವಿಷಾದನೀಯ. ಇಂತಹ ಹೇಳಿಕೆಗಳಿಗೆ ಕಿವಿಗೊಡದೆ ಸುರಕ್ಷಿತ ವಿಧಾನಗಳ ಮೂಲಕ ಗ್ರಹಣ ನೋಡಬಹುದು ಎಂದು ಸಮಿತಿ ಅಧ್ಯಕ್ಷ ಡಾ. ಸಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10.30 ಕ್ಕೆ ಪ್ರಾರಂಭವಾಗುವ ಗ್ರಹಣ 12 ಗಂಟೆಗೆ ಗರಿಷ್ಠ ಪ್ರಮಾಣವನ್ನು ತಲುಪಿ 1.30ಕ್ಕೆ ಮುಕ್ತಾಯವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯದ 75 ಕೇಂದ್ರಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಯೋಜನೆ ಮಾಡಿದೆ.
ಲಾಲ್‍ಬಾಗ್‍ನಲ್ಲಿ ಗ್ರಹಣ ವೀಕ್ಷಣೆ: ಪ್ರತಿ ಬಾರಿಯಂತೆ ಈ ಬಾರಿಯೂ ಲಾಲ್‍ಬಾಗ್ ನಡಿಗೆದಾರರ ಒಕ್ಕೂಟದ ಸಹಯೋಗದೊಂದಿಗೆ ಬೆಂಗಳೂರಿನ ಲಾಲ್‍ಬಾಗ್‍ನ ಬಂಡೆಯ ಬಳಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ಕೆ. ರವಿಚಂದ್ರ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಭಾಗವಹಿಸಬಹುದು. ಸುರಕ್ಷಿತ ಕನ್ನಡಕಗಳ ಮೂಲಕ ಗ್ರಹಣವನ್ನು ತೋರಿಸುವುದು, ಗ್ರಹಣಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರಕ್ಕೆ ಹಾಗೂ ಸಾಂಕೇತಿಕವಾಗಿ ಆಹಾರ ಸೇವನೆಗೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರಿಗೆ ಪ್ರಿಯವಾದ ಉಪ್ಪಿಟ್ಟು ಮತ್ತು ಮಂಡಕ್ಕಿಯನ್ನು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಜನರಲ್ಲಿ ಮೂಡಿಸುತ್ತಿರುವ ಭಯವನ್ನು ದೂರ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.







