ಏನಿದು ಸ್ವೀಟ್ಸ್ ಸಿಂಡ್ರೋಮ್?
ಸ್ವೀಟ್ಸ್ ಸಿಂಡ್ರೋಮ್ ಅಪರೂಪದ ಚರ್ಮರೋಗವಾಗಿದೆ. ಜ್ವರ ಮತ್ತು ಹೆಚ್ಚಾಗಿ ತೋಳುಗಳು,ಕುತ್ತಿಗೆ,ತಲೆ,ಬೆನ್ನು ಇತ್ಯಾದಿ ಕಡೆಗಳಲ್ಲಿ ನೋವಿನಿಂದ ಕೂಡಿದ ಕೆಂಪು ದದ್ದುಗಳು ಈ ರೋಗದ ಮುಖ್ಯಲಕ್ಷಣಗಳಲ್ಲಿ ಸೇರಿವೆ.
ಸ್ವೀಟ್ಸ್ ಸಿಂಡ್ರೋಮ್‌ಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಕೆಲವರಲ್ಲಿ ಸೋಂಕು,ಅನಾರೋಗ್ಯ ಅಥವಾ ಕೆಲವು ಔಷಧಿಗಳು ಸ್ವೀಟ್ಸ್ ಸಿಂಡ್ರೋಮ್‌ನ್ನು ಉಂಟು ಮಾಡುತ್ತವೆ. ಕೆಲವು ವಿಧಗಳ ಕ್ಯಾನ್ಸರ್ ರೋಗಗಳಿದ್ದಾಗಲೂ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಪ್ರೆಡ್ನಿಸೋನ್‌ನಂತಹ ಕಾರ್ಟಿಕೊಸ್ಟಿರಾಯ್ಡ್ ಮಾತ್ರೆಗಳನ್ನು ಸ್ವೀಟ್ಸ್ ಸಿಂಡ್ರೋಮ್‌ಗೆ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಚಿಕಿತ್ಸೆ ಆರಂಭಿಸಿದ ಕೆಲವೇ ದಿನಗಳಲ್ಲಿ ರೋಗದ ಲಕ್ಷಣಗಳು ಮಾಯವಾಗುತ್ತವೆ,ಆದರೆ ರೋಗವು ಮರುಕಳಿಸುವುದು ಸಾಮಾನ್ಯವಾಗಿದೆ.
ಲಕ್ಷಣಗಳು: ತೋಳುಗಳು,ಕುತ್ತಿಗೆ,ತಲೆ,ಬೆನ್ನು ಇತ್ಯಾದಿ ಕಡೆಗಳಲ್ಲಿ ನೋವಿನಿಂದ ಕೂಡಿದ ಕೆಂಪು ದದ್ದುಗಳು ಸ್ವೀಟ್ಸ್ ಸಿಂಡ್ರೋಮ್‌ನ ಮುಖ್ಯ ಲಕ್ಷಣಗಳಾಗಿವೆ. ಹೆಚ್ಚಾಗಿ ಜ್ವರ ಅಥವಾ ಶ್ವಾಸಕೋಶಗಳ ಮೇಲ್ಭಾಗದಲ್ಲಿ ಸೋಂಕುಗಳು ಕಾಣಿಸಿಕೊಂಡ ಬಳಿಕ ತ್ವರಿತವಾಗಿ ಈ ದದ್ದುಗಳು ಉಂಟಾಗುತ್ತವೆ. ಇವು ಬಹುಬೇಗನೆ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ,ನೋವಿನಿಂದ ಕೂಡಿದ ದದ್ದುಗಳು ಒಂದಕ್ಕೊಂದು ಸೇರಿಕೊಂಡು ವ್ಯಾಸದಲ್ಲಿ ಸುಮಾರು ಒಂದು ಇಂಚಿನಷ್ಟಿರುತ್ತವೆ.
ವೈದ್ಯರ ಭೇಟಿ: ನೋವಿನಿಂದ ಕೂಡಿದ ಕೆಂಪು ಬಣ್ಣದ ದದ್ದು ಕಾಣಿಸಿಕೊಂಡು ಅದು ತ್ವರಿತವಾಗಿ ಹರಡುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.
ಕಾರಣಗಳು: ಹೆಚ್ಚಿನ ಪ್ರಕರಣಗಳಲ್ಲಿ ಸ್ವೀಟ್ಸ್ ಸಿಂಡ್ರೋಮ್‌ಗೆ ಕಾರಣ ಗೊತ್ತಾಗಿಲ್ಲ. ಕೆಲವೊಮ್ಮೆ ಕ್ಯಾನ್ಸರ್‌ನೊಂದಿಗೆ,ಹೆಚ್ಚಾಗಿ ರಕ್ತಕ್ಯಾನ್ಸರ್‌ನೊಂದಿಗೆ ಸ್ವೀಟ್ಸ್ ಸಿಂಡ್ರೋಮ್ ಗುರುತಿಸಿಕೊಂಡಿರುತ್ತದೆ.
ಕೆಲವೊಮ್ಮೆ ಈ ರೋಗವು ಸ್ತನ ಕ್ಯಾನ್ಸರ್ ಅಥವಾ ದೊಡ್ಡಕರುಳಿನ ಕ್ಯಾನ್ಸರ್‌ಗಳಿಂಹ ಘನ ಟ್ಯೂಮರ್‌ಗಳಿದ್ದಾಗ ಉಂಟಾಗಬಹುದು. ಕೆಲವೊಮ್ಮೆ ಔಷಧಿಗಳಿಂದ,ಸಾಮಾನ್ಯವಾಗಿ ಬಿಳಿಯ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುವ ಔಷಧಿಯಿಂದ ಸ್ವೀಟ್ಸ್ ಸಿಂಡ್ರೋಮ್ ಉಂಟಾಗುತ್ತದೆ.
ಅಪಾಯದ ಅಂಶಗಳು: ಲಿಂಗ: ಸ್ವೀಟ್ಸ್ ಸಿಂಡ್ರೋಮ್ ಅಪರೂಪದ ರೋಗವಾಗಿದ್ದರೂ ಕೆಲವೊಂದು ಅಂಶಗಳು ಈ ರೋಗಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಪುರುಷರಿಗಿಂತ ಮಹಿಳೆಯರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಯಸ್ಸು: ವಯಸ್ಸಾದವರು ಮತ್ತು ಶಿಶುಗಳನ್ನೂ ಈ ರೋಗವು ಬಾಧಿಸುತ್ತದೆಯಾದರೂ ಮುಖ್ಯವಾಗಿ 30ರಿಂದ 60 ವರ್ಷ ವಯೋಮಾನದವರು ಈ ರೋಗಕ್ಕೆ ಗುರಿಯಾಗುತ್ತಾರೆ.
ಕ್ಯಾನ್ಸರ್: ಕೆಲವೊಮ್ಮೆ ಕ್ಯಾನ್ಸರ್,ಅದರಲ್ಲೂ ರಕ್ತಕ್ಯಾನ್ಸರ್‌ನಿಂದ ನರಳುತ್ತಿರುವ ರೋಗಿಗಳಲ್ಲಿ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಸ್ತನ ಕ್ಯಾನ್ಸರ್,ಕರುಳಿನ ಕ್ಯಾನ್ಸರ್‌ನಂತಹ ಗಡ್ಡೆಗಳೊಂದಿಗೂ ಇದು ಗುರುತಿಸಿಕೊಂಡಿರುತ್ತದೆ.
ಇತರ ಆರೋಗ್ಯ ಸಮಸ್ಯೆಗಳು: ಉಸಿರಾಟ ವ್ಯವಸ್ಥೆಯು ಸೋಂಕಿಗೆ ತುತ್ತಾದ ಬಳಿಕ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ಕೆಲವರಲ್ಲ್ಲಿ ದದ್ದುಗಳು ಏಳುವ ಮುನ್ನ ಫ್ಲೂದಂತಹ ಲಕ್ಷಣಗಳು ಕಾಣಿಸಿಕೊಂಡಿರುತ್ತವೆ. ಕರುಳಿನ ಉರಿಯೂತವೂ ಸ್ವೀಟ್ಸ್ ಸಿಂಡ್ರೋಮ್‌ಗೆ ಕಾರಣವಾಗಬಹುದು.
ಗರ್ಭಾವಸ್ಥೆ: ಕೆಲವು ಮಹಿಳೆಯರು ಗರ್ಭ ಧರಿಸಿದ್ದಾಗ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ.
ಔಷಧಿಗಳು: ಔಷಧಿಗಳಿಗೆ ಪ್ರತಿವರ್ತನೆಯೂ ಸ್ವೀಟ್ಸ್ ಸಿಂಡ್ರೋಮ್‌ನ್ನು ಉಂಟು ಮಾಡಬಹುದು. ಅಝಥಿಯೊಪ್ರೈನ್,ಗ್ರಾನ್ಯುಲೊಸೈಟ್ ,ಕೆಲವು ಆ್ಯಂಟಿಬಯಾಟಿಕ್‌ಗಳು ಮತ್ತು ಕೆಲವು ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳು ಸ್ವೀಟ್ಸ್ ಸಿಂಡ್ರೋಮ್‌ನೊಂದಿಗೆ ನಂಟು ಹೊಂದಿವೆ.
ತೊಂದರೆಗಳು: ಚರ್ಮದಲ್ಲಿನ ದದ್ದುಗಳು ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ. ಹೀಗಾಗಿ ದದ್ದುಗಳು ಕಾಣಿಸಿಕೊಂಡ ಕೂಡಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಸ್ವೀಟ್ಸ್ ಸಿಂಡ್ರೋಮ್ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡ ಪ್ರಕರಣಗಳಲ್ಲಿ ದದ್ದುಗಳು ಏಳುವುದು ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದನ್ನು ಅಥವಾ ಮರುಕಳಿಸುತ್ತಿರುವುದನ್ನು ಸೂಚಿಸಬಹುದು.







