ಬಾರ್ಸಿಲೋನ-ಸೆವಿಲ್ಲಾ ಪಂದ್ಯ ಡ್ರಾ
ಲಾ ಲಿಗಾ: ಉಭಯ ತಂಡಗಳು ಗೋಲು ಗಳಿಸಲು ವಿಫಲ

ಮ್ಯಾಡ್ರಿಡ್, ಜೂ.20: ಲಾ ಲಿಗಾ ಫುಟ್ಬಾಲ್ ಲೀಗ್‌ನಲ್ಲಿ ಸೆವಿಲ್ಲಾ ತಂಡದ ವಿರುದ್ಧ ಬಾರ್ಸಿಲೋನ ಗೋಲುರಹಿತ ಡ್ರಾ ಸಾಧಿಸಿದೆ. ಅಗ್ರಸ್ಥಾನದೊಂದಿಗೆ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಬಾರ್ಸಿಲೋನ ಎರಡನೇ ಸ್ಥಾನ ತಲುಪುವ ಭೀತಿಯಲ್ಲಿದೆ.
ಶುಕ್ರವಾರ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಕ್ಕೆ ಗೋಲು ಮತ್ತು ಗೆಲುವು ನಿರಾಕರಿಸಿದ ಸೆವಿಲ್ಲಾ ತಂಡ ಗೋಲುರಹಿತ(0-0) ಡ್ರಾ ಮಾಡಿಕೊಂಡಿತು. ಇದರಿಂದಾಗಿ ಬಾರ್ಸಿಲೋನ ತಂಡ ರಿಯಲ್ ಮ್ಯಾಡ್ರಿಡ್‌ಗಿಂತ ಕೇವಲ 3 ಅಂಕಗಳಿಂದ ಮುಂದಿದೆ.
ಲಾ ಲಿಗಾ ಟೂರ್ನಿಯ 30 ಪಂದ್ಯಗಳಲ್ಲಿ ಬಾರ್ಸಿಲೋನ 20 ಗೆಲುವಿನೊಂದಿಗೆ 65 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ರಿಯಲ್ ಮ್ಯಾಡ್ರಿಡ್ 29 ಪಂದ್ಯಗಳಲ್ಲಿ 18 ಗೆಲುವಿನೊಂದಿಗೆ 62 ಪಾಯಿಂಟ್ಸ್ ನೊಂದಿಗೆ ಎರಡನೇ ಸ್ಥಾನ ಹಾಗೂ ಸೆವಿಲ್ಲಾ 30 ಪಂದ್ಯಗಳಲ್ಲಿ 15 ರಲ್ಲಿ ಗೆಲುವು ಸಾಧಿಸಿ 52 ಪಾಯಿಂಟ್ಸ್ ಪಡೆದಿದೆ.
ರವಿವಾರದಂದು ರಿಯಲ್ ಮ್ಯಾಡ್ರಿಡ್ ತಂಡ ಎದುರಾಳಿ ರಿಯಲ್ ಸೊಸೈಡಾಡ್ ತಂಡವನ್ನು ಸೋಲಿಸಿದರೆ ಬಾರ್ಸಿಲೋನವನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನಕ್ಕೆ ಲಗ್ಗೆಯಿಡಲು ಸಾಧ್ಯವಾಗುತ್ತದೆ.
ಬಾರ್ಸಿಲೋನದ ಲಿಯೊನೆಲ್ ಮೆಸ್ಸಿ ಕ್ಲಬ್ ಪರ 699 ಗೋಲುಗಳನ್ನು ಗಳಿಸಿದ್ದಾರೆ. ಆದರೆ 700ನೇ ಗೋಲು ಗಳಿಸಲು ವಿಫಲರಾದರು. ಪ್ರಥಮಾರ್ಧದಲ್ಲಿ ಫ್ರೀ ಕಿಕ್‌ನೊಂದಿಗೆ ಗೋಲು ಗಳಿಸುವ ಯತ್ನದಲ್ಲಿ ಮೆಸ್ಸಿ ಯಶಸ್ಸು ಗಳಿಸಲಿಲ್ಲ. ಹೆಚ್ಚುವರಿ ಸಮಯದಲ್ಲಿ ಸೆರ್ಗಿಯೊ ರೆಗುಯಿಲನ್‌ಗೆ ಗೋಲು ಗಳಿಸುವ ಅದ್ಭುತ ಅವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಾರ್ಸಿಲೋನದ ಗೋಲ್‌ಕೀಪರ್ ಮಾರ್ಕ್-ಆಂಡ್ರೆ ಟೆರ್ ಸ್ಟೆಗೆನ್ ಸೇವ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡಲಿಲ್ಲ.
ಬಾರ್ಸಿಲೋನದ ಸ್ಟ್ರೈಕರ್ ಲೂಯಿಸ್ ಸುಯೆರೆಝ್ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಮರಳಿದ ಬಳಿಕ ಮೆಸ್ಸಿ ಹಾಗೂ ಮಾರ್ಟಿನ್ ಬ್ರಾತ್‌ವೈಟ್ ಅವರೊಂದಿಗೆ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೆಸ್ಸಿ ಎರಡು ಫ್ರೀ-ಕಿಕ್‌ನಲ್ಲಿ ಪ್ರಯತ್ನ ಮಾಡಿದರು. ಸೆವಿಲ್ಲಾದ ಮಾಜಿ ಮಿಡ್ ಫೀಲ್ಡರ್ ಇವಾನ್ ರಾಕಿಟಿಕ್ ಗುರಿ ತಪ್ಪಿತು. ಪ್ರಥಮಾರ್ಧ ಕೊನೆಗೊಳ್ಳಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಮೆಸ್ಸಿ ಸೆವಿಲ್ಲಾದ ಡಿಯಾಗೊ ಕಾರ್ಲೊಸ್‌ರನ್ನು ನೆಲಕ್ಕೆ ತಳ್ಳಿದರು. ಇದರಿಂದಾಗಿ ಸ್ವಲ್ಪ ಹೊತ್ತು ಉದ್ವಿಗ್ನತೆ ಉಂಟಾಯಿತು. ಈ ಘಟನೆಗೆ ಸಂಬಂಧಿಸಿ ಅರ್ಜೆಂಟೀನದ ಮೆಸ್ಸಿ ಸುಲಭವಾಗಿ ಶಿಕ್ಷೆಯಿಂದ ಪಾರಾದರು. ನಂತರ ಸೆರ್ಗಿ ಯೊ ಬುಸ್‌ಕ್ವೆಟ್ಸ್‌ಗೆ ಹಳದಿ ಕಾರ್ಡ್ ತೋರಿಸಲಾಗಿದೆ.







